ಕಾರವಾರ: ಎರಡು ವಾರಗಳ ಮೊದಲೇ ಪ್ರಾಥಮಿಕ ಹಂತದ ಚುನಾವಣಾ ಕಾರ್ಯಗಳನ್ನು ಜಿಲ್ಲಾಡಳಿತ ಆರಂಭಿಸಿದ್ದು, ಚುನಾವಣಾ ನೀತಿ ಸಂಹಿತೆ ಜಾರಿ ಹಿನ್ನಲೆಯಲ್ಲಿ ಚೆಕ್‌ಪೋಸ್ಟ್‌ಗಳಲ್ಲಿ 69 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈಗಾಗಲೇ ಜಿಲ್ಲೆಯಾದ್ಯಂತ ರಾಜಕೀಯ ವ್ಯಕ್ತಿಗಳ ಬ್ಯಾನರ್, ಬಂಟಿಂಗ್ಸ್ ಫ್ಲೆಕ್ಸ್ ತೆರವುಗೊಳಿಸುವ ಕಾರ್ಯ ಮಾಡಲಾಗಿದೆ. ಬುಧವಾರದಿಂದಲೇ ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿದ್ದು, ರಾಜಕೀಯ ವ್ಯಕ್ತಿಗಳ ಭಾವಚಿತ್ರ ಇರುವ ಬ್ಯಾನರ್‌ಗಳು ಹಾಗೂ ಸರ್ಕಾರದ ವೆಬ್‌ಸೈಟ್‌ಗಳಿಂದ ಅದನ್ನು ಕೂಡಲೇ ತೆರವುಗೊಳಿಸಲಾಗಿದೆ ಎಂದರು.
ಅಕ್ರಮ ತಡೆಗೆ 25 ಚೆಕ್‌ಪೋಸ್ಟ್‌ಗಳನ್ನು ನಿರ್ಮಾಣ ಮಾಡಲಾಗಿದೆ. ಚುನಾವಣೆಯಲ್ಲಿ ಆಮಿಷ ನೀಡುವ ಪ್ರಕರಣ ಪತ್ತೆ ಕಾರ್ಯಕ್ಕೆ ವಿಶೇಷ ತಂಡಗಳನ್ನು ರಚನೆ ಮಾಡಲಾಗಿದೆ. ಗೋವಾದಿಂದ ರಾಜ್ಯಕ್ಕೆ ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ 40 ಲಕ್ಷ ರೂ. ಮೌಲ್ಯದ ಗೋವಾ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಎರಡು ಪ್ರಕರಣಗಳಲ್ಲಿ ಒಟ್ಟು 10 ಲಕ್ಷ ರೂ. ದಾಖಲೆ ಇಲ್ಲದ ಹಣವನ್ನು ವಶಪಡಿಸಿಕೊಳ್ಳಲಾಗಿದ್ದು, ದಾಖಲೆ ರಹಿತ ಸಾಗಣೆ ಮಾಡುತ್ತಿದ್ದ 7.5 ಲಕ್ಷ ರೂ. ಮೌಲ್ಯದ ಬೆಳ್ಳಿಯನ್ನು ಜಪ್ತಿಪಡಿಸಿಕೊಳ್ಳಲಾಗಿದೆ. ಉಳಿದಂತೆ ಗಾಂಜಾ, ಚರಸ್ ಮಾದಕ ವಸ್ತುಗಳನ್ನೂ ಪತ್ತೆ ಹಚ್ಚಿದ್ದು ಒಟ್ಟು 69 ಲಕ್ಷ ರೂ. ಮೌಲ್ಯದ ಅಕ್ರಮವಾಗಿ ಸಾಗಿಸುತ್ತಿದ್ದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದರು.
ಸರ್ಕಾರದಿಂದ ಜಾರಿಯಾದ ಕಾಮಗಾರಿಗಳಲ್ಲಿ ಆರಂಭವಾಗಿರುವ, ಅನುಮೋದನೆಯಾಗಿ ಪ್ರಾರಂಭವಾಗದ ಹಾಗೂ ಅನುಮೋದನೆ ಆಗದ ಕಾಮಗಾರಿಗಳ ಪಟ್ಟಿಯನ್ನು ಮಾಡಲಾಗುತ್ತಿದೆ. ಇದರಿಂದ ನೀತಿ ಸಂಹಿತೆ ಉಲ್ಲಂಘನೆಯಾಗದ ರೀತಿಯಲ್ಲಿ ಕಾಮಗಾರಿಗಳ ಕೆಲಸದ ಮೇಲೂ ನಿಗಾ ವಹಿಸಲು ಕ್ರಮ ಕೈಗೊಳ್ಳಲಾಗಿದೆ. ಇದರೊಂದಿಗೆ ಮಾಧ್ಯಮಗಳ ಮೇಲೂ ನಿಗಾ ಇರಿಸಲಾಗುತ್ತಿದ್ದು ಪ್ರಕಟವಾಗುವ ಜಾಹೀರಾತುಗಳು ಹಾಗೂ ಸುದ್ದಿಗಳಿಂದ ನೀತಿ ಸಂಹಿತೆ ಉಲ್ಲಂಘನೆಯಾಗುವಂತೆ ಇದ್ದಲ್ಲಿ ಅಂತಹ ಮಾಧ್ಮಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು” ಎಂದರು.