Breaking News

ರಾಜ್ಯದ 6 ಕಡೆಗೆ ಅಪ್ಪು ಎಕ್ಸ್ ಪ್ರೆಸ್ ಅಂಬುಲೆನ್ಸ್ ವಿತರಣೆ, ಪ್ರಕಾಶ್ ರೈ ಧನ್ಯವಾದ

 

ಬೆಂಗಳೂರು: ನಟ ಪುನೀತ್ ರಾಜ್​ಕುಮಾರ್ ಅವರು ಅರ್ಧಕ್ಕೆ ಬಿಟ್ಟುಹೋದ ಸಮಾಜ ಸೇವೆಗೆ ಕುಟುಂಬ, ಅಭಿಮಾನಿಗಳು ಹೆಗಲುಕೊಟ್ಟಿದ್ದಾರೆ. ಪುನೀತ್ ರಾಜ್​ಕುಮಾರ್​ಗೆ ಆಪ್ತರಾಗಿದ್ದ ನಟ ಪ್ರಕಾಶ್ ರೈ ಅವರು ಅಪ್ಪು ಹೆಸರಲ್ಲಿ ಸೇವಾ ಕಾರ್ಯ ಮಾಡುತ್ತಿದ್ದು, ಅಪ್ಪು ಎಕ್ಸ್​ಪ್ರೆಸ್ ಹೆಸರಿನ ಅಂಬುಲೆನ್ಸ್ ವಾಹನಗಳನ್ನು ಉಚಿತವಾಗಿ ಆಸ್ಪತ್ರೆಗಳಿಗೆ ನೀಡುತ್ತಿದ್ದಾರೆ. ಈ ಕಾರ್ಯಕ್ಕೆ ಅವರು ತಮಿಳು ನಟ ಸೂರ್ಯ ಹಾಗೂ ತೆಲುಗು ನಟ ಚಿರಂಜೀವಿ ಅವರ ಸಹಾಯ ಪಡೆದಿದ್ದರು. ಆದರೆ, ಅಪ್ಪು ಅವರ ಸ್ಮರಣೆ ಕಾರ್ಯಕ್ರಮದಲ್ಲಿ ನಟ ಯಶ್  ನಾನು ಸಹ ಈ ಕಾರ್ಯದಲ್ಲಿ ಕೈ ಜೋಡಿಸುವುದಾಗಿ ಘೋಷಿಸಿ ಕರ್ನಾಟಕದ ಪ್ರತಿ ಜಿಲ್ಲೆಗೂ ಒಂದೊಂದು ಅಂಬುಲೆನ್ಸ್ ಅನ್ನು ತಲುಪಿಸೋಣ ಎಂದು ವಾಗ್ದಾನ ನೀಡಿದ್ದರು.

ಇದರ ಭಾಗವಾಗಿ ರಾಜ್ಯದ ಆರು ಜಿಲ್ಲೆಗಳಿಗೆ ಅಪ್ಪು ಅಂಬುಲೆನ್ಸ್ ಅನ್ನು ಪ್ರಕಾಶ್ ರೈ ಅವರು ಉಚಿತವಾಗಿ ನೀಡಿದ್ದಾರೆ. ಈ ಕುರಿತು ಅವರು ಟ್ವಿಟರ್ ಮೂಲಕ ವಿಡಿಯೊ ಹಂಚಿಕೊಂಡಿದ್ದು, ಸಹಾಯ ಮಾಡಿದ ನಟ ಯಶ್, ಸೂರ್ಯ ಹಾಗೂ ಚಿರಂಜೀವಿ ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ.

  1.  

ವಿಡಿಯೊದಲ್ಲಿ ಪ್ರಕಾಶ್ ರೈ ಮಾತನಾಡಿ, ಅಪ್ಪು ನಮ್ಮೆಲ್ಲರೊಟ್ಟಿಗೆ ಶಾಶ್ವತವಾಗಿ ಉಳಿಯಬೇಕೆಂದರೆ ಅವರು ಮಾಡುತ್ತಿದ್ದ ಸಮಾಜ ಸೇವೆಯನ್ನು ನಾವು ಮುಂದುವರೆಸಬೇಕಾಗಿದೆ. ಹಾಗಾಗಿ ನಾನು ನನ್ನ ಪ್ರಕಾಶ್ ರಾಜ್ ಫೌಂಡೇಶನ್ ಮೂಲಕ ಅಪ್ಪು ಎಕ್ಸ್​ಪ್ರೆಸ್ ಕನಸು ಕಂಡೆ. ಪ್ರತಿಜಿಲ್ಲೆಗೂ ಅಪ್ಪು ಎಕ್ಸ್​ಪ್ರೆಸ್ ಅಂಬುಲೆನ್ಸ್ ಸೇವೆ ನೀಡುವ ಕಾರ್ಯವನ್ನು ನಾವು ಮೈಸೂರಿನಿಂದ ಆರಂಭಿಸಿದೆವು. ಇದೀಗ ಅದರ ಎರಡನೇ ಹಂತವಾಗಿ ಬೀದರ್, ಕಲಬುರಗಿ, ಕೊಳ್ಳೆಗಾಲ, ಕೊಪ್ಪಳ, ಉಡುಪಿಗೆ ಅಂಬುಲೆನ್ಸ್ ವಿತರಿಸುತ್ತಿದ್ದೇವೆ ಎಂದು ಸಂತೋಷ ಹಂಚಿಕೊಂಡಿದ್ದಾರೆ.

ಆದರೆ ಈ ಬಾರಿ ನಾನು ಒಬ್ಬಂಟಿಯಲ್ಲ. ನಮ್ಮೊಂದಿಗೆ ಮೆಗಾಸ್ಟಾರ್ ಚಿರಂಜೀವಿ, ನಟ ಸೂರ್ಯ, ನಮ್ಮೆಲ್ಲರ ಪ್ರೀತಿಯ ಯಶ್ ಹಾಗೂ ವೆಂಕಟ್ ಅವರು ಇದ್ದಾರೆ. ಯಶ್ ಹೇಳಿದ ಮಾತು ನನಗೆ ಬಹಳ ಇಷ್ಟವಾಯಿತು. ಸರ್, ಇದು ನಿಮ್ಮೊಬ್ಬರ ಕನಸಲ್ಲ, ನಮ್ಮೆಲ್ಲರ ಕನಸು ಎಂದಿದ್ದರು. ಅವರ ಉದಾರತೆಗೆ ನಾನು ಧನ್ಯವಾದ ಅರ್ಪಿಸುತ್ತೇನೆ. ಈ ಆಂಬುಲೆನ್ಸ್ ವಿತರಣೆಯನ್ನು ದೊಡ್ಡ ಸಮಾರಂಭವಾಗಿ ಮಾಡಬಹುದಿತ್ತು. ಆದರೆ ಯಶ್ ಹಾಗೂ ನಾನು ಯೋಚಿಸಿದೆವು, ಆದರೆ  ಸಮಾರಂಭ ಮಾಡಲು ಖರ್ಚಾಗುವ ಹಣದಲ್ಲಿ ಇನ್ನೊಂದು ಅಂಬುಲೆನ್ಸ್ ಖರೀದಿ ಮಾಡಬಹು ಎಂಬ ಆಲೋಚನೆ ಬಂತು ಹಾಗಾಗಿ ಯಾವುದೇ ಆಡಂಬರ,  ಅಬ್ಬರವಿಲ್ಲದೆ ಸರಳ ಕಾರ್ಯಕ್ರಮದಲ್ಲಿ ವಿತರಣೆ ಮಾಡುತ್ತಿದ್ದೇವೆ ಎಂದು ಪ್ರಕಾಶ್ ರೈ ಹೇಳಿದ್ದಾರೆ.

ಕೆಲವು ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ, ಪ್ರತಿ ಜಿಲ್ಲೆಗೂ ಆಂಬುಲೆನ್ಸ್ ತಲುಪಿಸುತ್ತೇವೆ ಎಂದು ಯಶ್ ಹೇಳಿದ್ದ ವಿಡಿಯೋ ಹಂಚಿಕೊಂಡು ‘ಆಂಬುಲೆನ್ಸ್ ಬಂತಾ?’ ಎಂದು ಕೆಲವರು ಕಾಲೆಳೆದಿದ್ದರು. ಆದರೆ ಇದೀಗ ಯಶ್, ಪ್ರಕಾಶ್ ರೈ, ಸೂರ್ಯ, ಚಿರಂಜೀವಿ, ಕೆವಿಎಂ ವೆಂಕಟ್ ಅವರುಗಳು ಐದು ಆಂಬುಲೆನ್ಸ್ ವಿತರಣೆ ಮಾಡಿದ್ದಾರೆ. ಮುಂದಿನ ಹಂತದಲ್ಲಿ ಇನ್ನಷ್ಟು ಜಿಲ್ಲೆಗಳಿಗೆ ಆಂಬುಲೆನ್ಸ್ ವಿತರಣೆ ನಡೆಯುವ ಭರವಸೆ ಇದೆ.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com