Breaking News

ಜಿಲ್ಲೆಯ ರೋಗಿಗಳಿಗೆ ಪ್ರಕೃತಿ ಚಿಕಿತ್ಸೆ ವರ: ಜಿಲ್ಲಾಧಿಕಾರಿ ರವಿಕುಮಾರ್

 

ಮಂಗಳೂರು:  ಆಯುಷ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ರಾಜ್ಯದಲ್ಲೇ ಮೊದಲ ಬಾರಿಗೆ ಪ್ರಕೃತಿ ಚಿಕಿತ್ಸಾ ವಿಭಾಗ ಆರಂಭಿಸಿರುವುದು ಶ್ಲಾಘನೀಯ. ಪ್ರಕೃತಿ ಚಿಕಿತ್ಸೆಗೆ ದೀರ್ಘ ಕಾಲದ ಚಿಕಿತ್ಸಾ ಪದ್ದತಿ ಇದೆ.  ಹಳೆಯ ತಲಮಾರಿನ ಜನರು ಆಸ್ಪತ್ರೆಗಳ ಸೌಲಭ್ಯ ಇಲ್ಲದೇ ಇದ್ದಾಗ ಈ ಪದ್ದತಿಗಳನ್ನು ಆರೋಗ್ಯ ರಕ್ಷಣೆಗೆ ಬಳಸುತ್ತಿದ್ದರು. ಮನೆ ಮದ್ದು ಪರಿಣಾಮಕಾರಿ ಚಿಕಿತ್ಸಾ ವಿಧಾನಗಳಾಗಿದ್ದವು ಎಂದು ಜಿಲ್ಲಾಧಿಕಾರಿ ರವಿಕುಮಾರ್ ಹೇಳಿದರು.

 

ಶನಿವಾರ ನಗರದ ವೆನ್ ಲಾಕ್ ಆಯುಷ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ರೂಪಾಯಿ 20 ಲಕ್ಷ  ವೆಚ್ಚದ ಅತ್ಯಾಧುನಿಕ ನ್ಯಾಚುರೋಪತಿ ಉಪಕರಣಗಳ ಹಸ್ತಾಂತರ ಮತ್ತು ನೂತನ ಪ್ರಕೃತಿ ಚಿಕಿತ್ಸಾ ವಿಭಾಗಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

 

ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಈ ರೀತಿಯ ಪ್ರಕೃತಿ ಚಿಕಿತ್ಸೆಗೆ ಅನುಕೂಲವಾಗಬೇಕಾದ ಭೂಮಿ ಮತ್ತು ಮೂಲಸೌಲಭ್ಯಕ್ಕೆ ಜಿಲ್ಲಾಡಳಿತ ಸಹಕಾರ ನೀಡಲಿದೆ. ಆಯುರ್ವೇದ, ನ್ಯಾಚುರೋಪತಿ, ಯುನಾನಿ ಚಿಕಿತ್ಸೆಗೆ ಹೆಚ್ಚಿನ ಬೇಡಿಕೆ ಇದೆ. ಸರ್ಕಾರಿ ಆಯುಷ್ ಆಸ್ಪತ್ರೆಯೊಂದರಲ್ಲಿ ಸುಸಜ್ಜಿತ  ಪ್ರಕೃತಿ ಚಿಕಿತ್ಸಾ ವಿಭಾಗ ಆರಂಭಿಸಿರುವುದು ನಗರದ ಬಡ ರೋಗಿಗಳಿಗೆ ವರ, ಜಿಲ್ಲೆಯ ಗ್ರಾಮೀಣ ಪ್ರದೇಶದ ಜನರಿಗೂ ಈ ಸೌಲಭ್ಯ ದೊರೆಯಬೇಕು. ಇದಕ್ಕಾಗಿ ತಾಲೂಕು ಮಟ್ಟದಲ್ಲಿ ಕಟ್ಟಡ, ಮೂಲಸೌಲಭ್ಯ ಒದಗಿಸಲಾಗುವುದು ಎಂದು ಹೇಳಿದರು.

  1.  

ಆಯುಷ್ ಆಸ್ಪತ್ರೆಗೆ  ಮಂಗಳೂರು ಕೆಮಿಕಲ್ಸ್ ಮತ್ತು ಫರ್ಟಿಲೈಸರ್ಸ್ ಲಿಮಿಟೆಡ್ (ಎಂಸಿಎಫ್) 20 ಲಕ್ಷ ರೂ.ಮೌಲ್ಯದ ಅತ್ಯಾಧುನಿಕ ಪ್ರಕೃತಿ ಚಿಕಿತ್ಸೆ ಸಂಬಂಧಿತ ಉಪಕರಣಗಳನ್ನು ಒದಗಿಸಿದೆ. ಈ ಮೂಲಕ ಎಂಸಿಎಫ್ ಸಿಎಸ್‌ಆರ್ ನಿಧಿ ಉತ್ತಮ ಕಾರ್ಯಕ್ಕೆ ವಿನಿಯೋಗವಾಗಿದೆ ಎಂದರು.

ಜಿಲ್ಲಾ ಆಯುಷ್ ಅಧಿಕಾರಿ ಡಾ. ಮಹಮ್ಮದ್ ಇಕ್ಬಾಲ್ ಪ್ರಾಸ್ತಾವಿಕ ಮಾತನಾಡಿ, ಸರ್ಕಾರಿ ಮಟ್ಟದಲ್ಲಿ ಪ್ರಥಮ ಬಾರಿಗೆ ಅತ್ಯಾಧುನಿಕ ಉಪಕರಣಗಳನ್ನು ಒಳಗೊಂಡ ಸುಸಜ್ಜಿತ ಪ್ರಕೃತಿ ಚಿಕಿತ್ಸಾ ವಿಭಾಗವೊಂದು ಸಾರ್ವಜನಿಕತ ಸೇವೆಗೆ ತೆರದುಕೊಂಡಿದೆ. ಈ ಕೇಂದ್ರದಲ್ಲಿ ಎಲ್ಲ ವಿಧದ ಜಲಚಿಕಿತ್ಸೆ, ಸೋನಾಬಾತ್, ಅಕ್ಯುಪಂಕ್ಚರ್, ಅಕ್ಯುಪ್ರೆಶರ್, ಅಯಾನ್ ಡೆಟಾಕ್ಸ್ ಥೆರಪಿ, ಮ್ಯಾಗ್ನೆಟಿಕ್ ಥೆರಪಿ, ಮ್ಯೂಸಿಕ್ ಥೆರಪಿ, ಮಡ್‌ಬಾತ್ ಸಹಿತ ಎಲ್ಲ ಪ್ರಮುಖ ಹಾಗೂ ಅಪರೂಪದ ಚಿಕಿತ್ಸೆಗಳು ಲಭ್ಯ. ಬಿಪಿಎಲ್ ಕಾರ್ಡ್‌ದಾರರಿಗೆ ಉಚಿತವಾಗಿ ಚಿಕಿತ್ಸೆ ಲಭ್ಯವಿದ್ದು, ಮುಂಬರುವ ದಿನಗಳಲ್ಲಿ ಸರಕಾರಿ ಮಾರ್ಗಸೂಚಿಯಂತೆ ಎಪಿಎಲ್ ಕಾರ್ಡ್‌ದಾರರಿಗೂ ಕನಿಷ್ಠ ದರದಲ್ಲಿ ಚಿಕಿತ್ಸೆ ದೊರೆಯಲಿದೆ ಎಂದರು.

ಎಂಸಿಎಫ್ ಚೀಫ್ ಪ್ರೊಡಕ್ಷನ್ ಆಫೀಸರ್ ಗಿರೀಶ್ ಎಸ್., ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಕಿಶೋರ್‌ಕುಮಾರ್, ವೆನ್ಲಾಕ್ ಆಸ್ಪತ್ರೆ ಜಿಲ್ಲಾ ಸರ್ಜನ್ ಡಾ. ಸದಾಶಿವ ಶ್ಯಾನುಭೋಗ್ ಇದ್ದರು.

ಆಯುಷ್ ಇಲಾಖೆ ವಿವಿಧ ಅಧಿಕಾರಿಗಳು ವೈದ್ಯರು ಇದ್ದರು.

 

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com