Breaking News

ಡೆಮಾಕ್ರಸಿ ಈಸ್ ಇನ್ ಥ್ರೆಟ್ ಎಂದು ರಾಹುಲ್ ಹೇಳುತ್ತಿದ್ದರು: ಖಾದರ್

 

ಮಂಗಳೂರು: ರಾಹುಲ್ ಗಾಂಧಿ ಅವರು ಸತ್ಯ ಹೇಳುವುದನ್ನು ಬಿಜೆಪಿಗೆ ಸಹಿಸಲು ಆಗುತ್ತಿಲ್ಲ. ಬಿಜೆಪಿಗೆ ಚುನಾವಣೆ ಸಮಯದಲ್ಲಿ ಭಯ ಶುರುವಾಗಿದೆ. ರಾಹುಲ್ ಗಾಂಧಿ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿದ್ದು ಪ್ರಜಾಪ್ರಭುತ್ವದ ಮೇಲಿನ ದಾಳಿ, ದೇಶದ ಆತ್ಮಕ್ಕೆ ಧಕ್ಕೆ ಮಾಡುವ ಹುನ್ನಾರದ ಭಾಗ ಎಂದು ವಿಧಾನಸಭೆ ಉಪ ನಾಯಕ ಯು.ಟಿ ಖಾದರ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ರಾಹುಲ್ ಗಾಂಧಿ ಅವರು ಸತ್ಯ ಮಾತಾಡಲು ಬಿಡದವರು ಜನಸಾಮಾನ್ಯರು ಸತ್ಯ ಹೇಳಿದರೆ ಬಿಟ್ಟಾರೆಯೇ? ಬಿಜೆಪಿ ನಾಯಕರು ಏನೇ ಟಾರ್ಗೆಟ್ ಮಾಡಿದರೂ, ರಾಹುಲ್ ಸತ್ಯ ಹೇಳಲು ಹಿಂಜರಿಯಲಿಲ್ಲ. ರಾಹುಲ್ ಕೋಲಾರದಲ್ಲಿ ಮಾತನಾಡಿದ್ದಕ್ಕೆ ಗುಜರಾತ್ ಶಾಸಕ ಸೂರತ್ ಕೋರ್ಟಿನಲ್ಲಿ ದೂರು ನೀಡಿದ್ದರು. ಕೋರ್ಟ್ ತೀರ್ಪು ಕೊಟ್ಟು ಅದನ್ನು ಎರಡು ತಿಂಗಳ ಕಾಲ ಅಮಾನತಿನಲ್ಲಿರಿಸಿದೆ. ಹಾಗಿದ್ದರೂ, ರಾಹುಲ್ ಗಾಂಧಿ ಅವರನ್ನು ಸಂಸತ್ ಸ್ಥಾನದಿಂದ ಅನರ್ಹ ಮಾಡಲಾಗಿದೆ. ನ್ಯಾಯಾಧೀಶರೇ ತಮ್ಮ ತೀರ್ಪಅನ್ನು ಅಮಾನತಿನಲ್ಲಿಟ್ಟು ಆದೇಶ ಮಾಡಿದ್ದರೂ, ಅವರು ಅನರ್ಹ ಹೇಗೆ ಮಾಡುತ್ತಾರೆ ಎಂದು ಪ್ರಶ್ನೆ ಮಾಡಿದರು.

  1.  

ರಾಹುಲ್ ಸಂಸತ್ತಿನಲ್ಲಿ ಸತ್ಯ ಮಾತನಾಡಬಾರದು ಎಂದು ಹೀಗೆ ಮಾಡಿದ್ದಾರೆ. ಸಂಸತ್ತಿನಲ್ಲಿ ಮೊನ್ನೆ ರಾಹುಲ್ ಗಾಂಧಿ ಅವರು ಮಾತನಾಡಿದ ವೇಳೆ 20 ನಿಮಿಷ ಮೈಕ್ ಆಫ್ ಮಾಡಿದ್ದರು. ಇದರರ್ಥ ಬಿಜೆಪಿಗೆ ರಾಹುಲ್ ಬಗ್ಗೆ ಭಯ ಎಂದು ಅರ್ಥ. ಸತ್ಯವನ್ನು ಬಿಜೆಪಿ ಯಾವಾಗಲೂ ಒಪ್ಪಿಕೊಳ್ಳುವುದಿಲ್ಲ. ಕೆಲವೇ ವ್ಯಕ್ತಿಗಳಿಗೆ ಈ ದೇಶವನ್ನು ಮಾರುವ ಹುನ್ನಾರ ಹೊರ ಬರುತ್ತದೆ ಎಂದು ಈ ರೀತಿ ಮಾಡಿದ್ದಾರೆ. ಹಿಂದೆ 1975 ರಲ್ಲಿ ಇಂದಿರಾ ಗಾಂಧಿ ಅವರನ್ನು ಇದೇ ರೀತಿ ಸಂಸತ್ ಸ್ಥಾನದಿಂದ ಅನರ್ಹ ಮಾಡಿದ್ದರು. ನಂತರ 1980 ರಲ್ಲಿ ಇಂದಿರಾ ಗಾಂಧಿಗೆ ಸ್ಪಷ್ಟ ಜನಾದೇಶ ಬಂದಿತ್ತು ಎನ್ನುವುದನ್ನು ಮರೆಯಬಾರದು ಎಂದರು.

ನೀರವ್ ಮೋದಿ, ಲಲಿತ್ ಮೋದಿ ದೇಶ ಬಿಟ್ಟು ಹೋಗಿದ್ದಾರೆಂದು ದೇಶದ ಹಿತಾಸಕ್ತಿ ಮುಂದಿಟ್ಟು ಮಾತನಾಡುವುದು ಯಾರಿಗೂ ಮಾನನಷ್ಟ ಆಗುವುದಿಲ್ಲ. ಇದು ದೇಶದ ಮೇಲಾದ ದಬ್ಬಾಳಿಕೆ. ಡೆಮಾಕ್ರಸಿ ಈಸ್ ಇನ್ ಥ್ರೆಟ್ ಎಂದು ರಾಹುಲ್ ಹೇಳುತ್ತಿದ್ದರು. ಅದು ನಿಜವಾಗಿದ್ದು, ದೇಶದಲ್ಲಿ ಯಾರು ಕೂಡ ಇವರ ವಿರುದ್ಧ ಮಾತನಾಡುವ ಸ್ಥಿತಿಯಲ್ಲಿ ಇಲ್ಲ, ಇದನ್ನು ನಾವು ಖಂಡಿಸುತ್ತೇವೆ. ರಾಹುಲ್ ಗಾಂಧಿಗೆ ಹೀಗಾಯ್ತು ಎಂದು ನಾವೇನು ಧೃತಿಗೆಡುವುದಿಲ್ಲ. ಈ ರೀತಿಯ ನಡೆಯನ್ನು ಜನರು ಗಮನಿಸುತ್ತಾರೆ ಎಂದು ಖಾದರ್ ತಿಳಿಸಿದರು.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com