Breaking News

ಮಂಗಳೂರಿಗೆ ಪ್ರತ್ಯೇಕ ಮೀನುಗಾರಿಕಾ ವಿವಿ ಸ್ಥಾನಮಾನ, ಪ್ರಸ್ತಾವ ಸಲ್ಲಿಸಿ: ಸಚಿವ ರೂಪಾಲ

 

ಕರಾವಳಿ ಡೈಲಿನ್ಯೂಸ್

ಮಂಗಳೂರು:  ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವನ್ನು ಬೀದರ್ ನಿಂದ ಪ್ರತ್ಯೇಕಿಸಿ ಕರಾವಳಿ ಜಿಲ್ಲೆ ಮಂಗಳೂರಿನಲ್ಲಿರುವ ಮೀನುಗಾರಿಕಾ ಮಹಾವಿದ್ಯಾಲಯವನ್ನು ವಿಶ್ವವಿದ್ಯಾಲಯ ದರ್ಜೆಗೆ ಹೆಚ್ಚಿಸುವುದು ಅಥವಾ ರಾಷ್ಟ್ರೀಯ ಕಾಲೇಜು ಆಗಿ ಘೋಷಣೆ ಮಾಡುವ ಬಗ್ಗೆ ಅಧಿಕಾರಿಗಳ ಜತೆಗೆ ಚರ್ಚಿಸಿ ಸಾಧಕ–ಬಾಧಕಗಳ ಬಗ್ಗೆ ಸಮಗ್ರ ಯೋಜನೆ ಪ್ರಸ್ತಾವವನ್ನು ಸಲ್ಲಿಸುವಂತೆ ಕೇಂದ್ರ ಮೀನುಗಾರಿಕೆ, ಪಶು ಸಂಗೋಪನೆ ಮತ್ತು ಹೈನುಗಾರಿಕೆ ಸಚಿವ ಪರುಷೋತ್ತಮ್ ರೂಪಾಲ ಹೇಳಿದರು.

ನಗರದ ಡಾ. ಟಿ.ಎಂ.ಎ. ಪೈ ಸಭಾಂಗಣದಲ್ಲಿ ಮೀನುಗಾರರ ಸರ್ವತೋಮುಖ ಕಲ್ಯಾಣಕ್ಕಾಗಿ ಹಮ್ಮಿಕೊಂಡಿರುವ ನಾಲ್ಕನೇ ಹಂತದ ಸಾಗರ ಪರಿಕ್ರಮ ಕಾರ್ಯಕ್ರಮವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.

ಶಾಸಕ ವೇದವ್ಯಾಸ್ ಕಾಮತ್ ಅವರು ಮಂಗಳೂರಿನಲ್ಲಿಯೇ ಮೀನುಗಾರಿಕಾ ಪ್ರತ್ಯೇಕ ವಿವಿ ಸ್ಥಾಪನೆ ಬಗ್ಗೆ ಹೇಳಿರುವುದು ನನ್ನ ಮನಸ್ಸಿಗೆ ಹತ್ತಿರವಾಗಿದೆ. ಈ ಸಂಬಂಧ ಅಧಿಕಾರಿಗಳ ಜತೆಗೆ ಚರ್ಚೆ ಮಾಡಿ ಸಮಗ್ರವಾದ ಒಂದು ವರದಿಯನ್ನು ಸಲ್ಲಿಸುವಂತೆ ಹೇಳಿದರು.

ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆ ಅಡಿಯಲ್ಲಿ ಸಾಂಪ್ರದಾಯಿಕ ಮೀನುಗಾರಿಕೆ ನಡೆಸುವ  ಮೀನುಗಾರರಿಗೆ ಆಳ ಸಮುದ್ರ ಮೀನುಗಾರಿಕೆಗೆ ಅನುಕೂಲ ಆಗುವಂತೆ ಅವರಿಗಾಗಿಯೇ ಸರ್ಕಾರವು ಯಾಂತ್ರಿಕ ಬೋಟ್ ಗಳನ್ನು ನೀಡುವ ಬಗ್ಗೆ ಚಿಂತನೆ ನಡೆಸುತ್ತಿದೆ. ಈ ಕಾರ್ಯವೂ ಶೀಘ್ರವೇ ಕಾರ್ಯರೂಪಕ್ಕೆ ಬರಲಿದೆ ಎಂದರು.

  1.  

ಪ್ರಧಾನಿ ನರೇಂದ್ರ ಮೋದಿ ಅವರು ಮೀನುಗಾರರ ಕಲ್ಯಾಣಕ್ಕಾಗಿ ಹಲವು ಮಹತ್ವದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಮೀನುಗಾರರು ಇದರ ಪ್ರಯೋಜನ ಪಡೆದುಕೊಂಡಿದ್ದಾರೆ. ಮತ್ಸ್ಯ ಸಂಪದ ಯೋಜನೆ ಮೂಲಕ ಮೀನುಗಾರರರ ಜೀವನ ಮಟ್ಟ ಸುಧಾರಣೆಗಾಗಿ ಸಾಕಷ್ಟು ಅನುದಾನವನ್ನು ನೀಡಲಾಗುತ್ತದೆ. ಕಿಸಾನ್ ಕ್ರೆಡಿಟ್ ಕಾರ್ಡ್ ಸೌಲಭ್ಯವು ರೈತರಿಗೆ ಮಾತ್ರ ಸಿಗುತ್ತಿತ್ತು. ಈಗ ಮೀನುಗಾರರಿಗೂ ಅದನ್ನು ನಮ್ಮ ಸರ್ಕಾರವು ವಿಸ್ತರಣೆ ಮಾಡಿದೆ. ಲಕ್ಷಾಂತರ ಮಂದಿ ಮೀನುಗಾರರು ಈ ಸೌಲಭ್ಯವನ್ನು ಪಡೆದುಕೊಳ್ಳಲಿದ್ದಾರೆ ಎಂದರು.

ಶಾಸಕ ವೇದವ್ಯಾಸ್ ಕಾಮತ್ ಮಾತನಾಡಿ, ಕರಾವಳಿ ಜಿಲ್ಲೆ ಮಂಗಳೂರಿನಲ್ಲಿ ಬರುವ ದಿನಗಳಲ್ಲಿ ಮೀನುಗಾರಿಕಾ ವಿವಿ ಸ್ಥಾಪನೆ ಮಾಡಬೇಕು, ಕೇರಳದಲ್ಲಿ ಕರಾವಳಿ ತೀರ ಪ್ರದೇಶವೂ ಹೆಚ್ಚಾಗಿದ್ದು, ರಾಜ್ಯದ ಕರಾವಳಿ ತೀರ ಪ್ರದೇಶದ ವಿಸ್ತಾರವೂ ಕಡಿಮೆ ಇದ್ದು, ಆಳ ಸಮುದ್ರ ಮೀನುಗಾರಿಕೆಗೆ ಹೆಚ್ಚು ಒತ್ತು ನೀಡುವುದು, ಬರುವ ದಿನಗಳಲ್ಲಿ ನಾಟೀಕಲ್ ವ್ಯಾಪ್ತಿಯಲ್ಲಿಯೇ ಮೀನುಗಾರಿಕೆ ನಡೆಸಬೇಕಾದ ಸ್ಥಿತಿ ನಮ್ಮ ಮೀನುಗಾರರದು, ಇಲ್ಲದೇ ಇದ್ದರೆ ಅವರು ಮೀನುಗಾರಿಕೆಗೆ ಕೇರಳವನ್ನು ಅವಲಂಬನೆ ಮಾಡಬೇಕಾಗುತ್ತದೆ. ಕೇರಳ, ಮಹಾರಾಷ್ಟ್ರ, ಕರ್ನಾಟಕ ರಾಜ್ಯದ ಮೀನುಗಾರಿಕೆ ವ್ಯವಸ್ಥೆ ಸರಿಪಡಿಸಬೇಕು, ನಮ್ಮ ಮೀನುಗಾರರಿಗೆ ಜಟ್ಟಿ ನಿರ್ಮಾಣ ಮಾಡಿ ಪ್ರೋತ್ಸಾಹಿಸಬೇಕು. ಮೀನುಗಾರರು ಸೀಮೆ ಎಣ್ಣೆಯನ್ನು ಬಳಸಿ, ಸಾಂಪ್ರದಾಯಿಕ ಮೀನುಗಾರರು ಆಳ ಸಮುದ್ರ ಮೀನುಗಾರಿಕೆ ಸಮಸ್ಯೆ ಉಂಟಾಗುತ್ತಿದ್ದು ಅವರಿಗೆ ಅಗತ್ಯಕ್ಕೆ ಬೇಕಾಗುವಷ್ಟು ಸೀಮೆಎಣ್ಣೆಯನ್ನು ಪೂರೈಸಬೇಕು ಎಂದು ಸಚಿವರಿಗೆ ಮನವಿ ಮಾಡಿದರು.

ಇದೇ ಸಂದರ್ಭ ಅವರು ಮೀನುಗಾರರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಸೇರಿದಂತೆ ವಿವಿಧ ಸವಲತ್ತುಗಳನ್ನು ವಿತರಣೆ ಮಾಡಲಾಯಿತು.

ಕೆಎಫ್ ಡಿಸಿ ಅಧ್ಯಕ್ಷ ಎ.ವಿ.ತೀರ್ಥರಾಮ, ಮೀನುಗಾರಿಕಾ ಇಲಾಖೆ ನಿರ್ದೇಶಕ ರಾಮಾಚಾರ್ಯ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರವಿಶಂಕರ್ ಮಿಜಾರ್, ಸರಕಾರದ ಅಧೀನ ಕಾರ್ಯದರ್ಶಿ ಸಲ್ಮಾ ಕೆ. ಫಾಹಿಮ್, ರೂಪಾ ಬೆನ್ ರೂಪಾಲ, ಜಂಟಿ ಕಾರ್ಯದರ್ಶಿ ಬಾಲಾಜಿ, ದಕ್ಷಿಣ ಕನ್ನಡ ಜಿಲ್ಲೆಯ ಮೀನುಗಾರಿಕಾ ಇಲಾಖೆ ಉಪನಿರ್ದೇಶಕ ಹರೀಶ್ ಕುಮಾರ್ ಸೇರಿದಂತೆ ಹಲವರು ಇದ್ದರು.

 

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com