ಉಡುಪಿ(ಕೋಟ): ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸಮುದಾಯದವರನ್ನು ಸರಕಾರವು ಬಹಳ ತುಚ್ಚವಾಗಿ ನಡೆಸಿಕೊಂಡಿದೆ. ದೌರ್ಜನ್ಯ, ಕೊಲೆ, ಅತ್ಯಾಚಾರ, ಸಾಮಾಜಿಕ ಬಹಿಷ್ಕಾರ ಹಾಕುವಂತಹ ಕೆಲಸ ಮಾಡುತ್ತಿದೆ ಎಂದು ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ಟಿ ಡಿ ರಾಜಗಿರಿ ಆರೋಪಿಸಿದರು.
ರಾಜ್ಯ ಸರ್ಕಾರವು ಒಂದು ರೀತಿ ಅಘೋಷಿತ ತುರ್ತು ಪರಿಸ್ಥಿತಿ ಹೇರಿದಂತೆ ಇದೆ. ಸರಕಾರವೇ ಹಿಂದೆ ನಿಂತುಕೊಂಡು ದಲಿತರ ಮೇಲೆ ದೌರ್ಜನ್ಯ ನಡೆಸುತ್ತಿರುವ ಪ್ರಕರಣಗಳು ಗಮನಕ್ಕೆ ಬಂದಿವೆ. ಕೇಂದ್ರ ಸರಕಾರದಿಂದ 1989 ರಲ್ಲಿ ಎಸ್ಸಿ ,ಎಸ್ಟಿ ಅಟ್ರಸಿಟಿ ಕಾಯ್ದೆ ಜಾರಿಯಲ್ಲಿದೆ. ಆದರೆ ಇವತ್ತಿನವರೆಗೆ ರಾಜ್ಯ ಸರಕಾರ ಜಾರಿಗೆ ತಂದಿಲ್ಲ. ಇದನ್ನು ಜಾರಿಗೆ ತರುವಂತದ್ದು ರಾಜ್ಯ ಸರಕಾರದ ಜವಾಬ್ದಾರಿ. ಆದ್ದರಿಂದ ರಾಜ್ಯದಲ್ಲಿ ದೌರ್ಜನ್ಯ, ಕೊಲೆ ಅತ್ಯಾಚಾರ, ಸಾಮಾಜಿಕ ಬಹಿಷ್ಕಾರ ನಡೆಯುತ್ತಿವೆ ಎಂದರು.
ಎಸ್ಸಿ, ಎಸ್ಟಿ ಕಾಯ್ದೆಯಲ್ಲಿ ಇರುವ ಎಲ್ಲ ಕಾನೂನು ಕೂಡಲೇ ಅನುಷ್ಠಾನಗೊಳಿಸಬೇಕು. ಸಾಮಾಜಿಕ ಅಸಮಾನತೆಯಿಂದ ಬಳಲುತ್ತಿರುವಂತಹ ಅಸ್ಪೃಶ ಸಮುದಾಯದವರಿಗೆ ಸಾಮಾಜಿಕ ಸಮಾನತೆ ಕೊಡುವಂತಹ ನಿಟ್ಟಿನಲ್ಲಿ ಹೊಸ ಕಾನೂನನ್ನು ಜಾರಿಗೆ ತರುವಂತಹ ಪ್ರಾಮಾಣಿಕ ಪ್ರಯತ್ನ ಈ ಸರಕಾರ ಮಾಡಿಲ್ಲ. ಆದ್ದರಿಂದ ಕೊಡಲೇ ಅನುಷ್ಠಾನ ಗೊಳಿಸಬೇಕು. ಈ ಹಿಂದೆ ಸಮಾಜ ಕಲ್ಯಾಣ ಸಚಿವರ ವಿರುದ್ಧ ಹಲವು ಬಾರಿ ಧರಣಿ ಮಾಡಿದ್ದೇವೆ. ಜತೆಗೆ ಮನವಿ ಸಹ ನೀಡಿದ್ದೇವೆ. ಆದರೆ ಯಾವುದೇ ಕಾನೂನು ಜಾರಿಗೆ ತರುವ ಕೆಲಸ ಆಗಿಲ್ಲ. ಈ ಕಾರಣದಿಂದಲೇ ಸಮಾಜ ಕಲ್ಯಾಣ ಸಚಿವರ ಮನೆ ಎದುರು ಅನಿರ್ದಿಷ್ಟವಾದಿ ಧರಣಿ ಮಾಡಲು ತೀರ್ಮಾನ ಮಾಡಿದ್ದೇವೆ ಎಂದರು.