Breaking News

ಪ್ರಾಥಮಿಕ ಶಿಕ್ಷಣ ಹಂತದಲ್ಲಿಯೇ ನೈತಿಕ ಶಿಕ್ಷಣ ಕಲಿಸಿ: ಹೊರಟ್ಟಿ

 

ಬ್ರಹ್ಮಾವರ: ಮಕ್ಕಳಲ್ಲಿ ಪ್ರಾಥಮಿಕ ಹಂತದಲ್ಲಿಯೇ ಪಠ್ಯ ವಿಷಯದೊಂದಿಗೆ ನೈತಿಕ ಶಿಕ್ಷಣ ನೀಡಿ ಅವರಲ್ಲಿ ಉತ್ತಮ ಸಂಸ್ಕಾರ ಬೆಳೆಸುವ ಕಾರ್ಯವನ್ನು ಶಿಕ್ಷಕರು ಮಾಡಬೇಕು ಎಂದು ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ಬ್ರಹ್ಮಾವರ ಹೆರಂಜೆ ಬ್ರಹ್ಮಾವರ ಸ್ಪೋರ್ಟ್ಸ್‌ ಕ್ಲಬ್‌ನ ಆವರಣದಲ್ಲಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಬ್ರಹ್ಮಾವರ ಶಾಖೆಯ ಆಶ್ರಯದಲ್ಲಿ ನಡೆದ ಬ್ರಹ್ಮಾವರ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಶೈಕ್ಷಣಿಕ ಸಮ್ಮೇಳನ ಮತ್ತು ಶಿಕ್ಷಕಪಠ್ಯ ಬಂಧುಗಳ ಕುಟುಂಬ ಸಮ್ಮಿಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶಿಕ್ಷಕರು ತಮ್ಮ ಅನೇಕ ಬೇಡಿಕೆಗಳನ್ನು ಈಡೇರಿಸುವಂತೆ ಹೋರಾಟವನ್ನು ಮಾಡುವುದು ಸಹಜ. ಆದರೆ ಇದರೊಂದಿಗೆ ತಮ್ಮ ಕರ್ತವ್ಯವನ್ನು ಮರೆಯಬಾರದು ಎಂದು ಕಿವಿ ಮಾತು ಹೇಳಿದ ಅವರು ಹೆಣ್ಣು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವತ್ತ ನಾವು ಗಮನ ಕೊಡಬೇಕು, ಶಿಕ್ಷಕ ಶಿಕ್ಷಕಿಯರಿಗೆ ಮಾನಸಿಕ ನೆಮ್ಮದಿ ಇದ್ದಲ್ಲಿ ಮಾತ್ರ ಉತ್ತಮ ಶಿಕ್ಷಣ ನೀಡಲು ಸಾಧ್ಯ. ಈ ನಿಟ್ಟಿನಲ್ಲಿ ಸರ್ಕಾರ ಅವರ ಸಮಸ್ಯೆಗಳಿಗೆ ಸ್ಪಂದಿಸುತ್ತಲೇ ಇದೆ ಎಂದು ಹೇಳಿದರು.

ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ ಹೆಗ್ಡೆ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು.

  1.  

ಶಾಸಕ ಕೆ.ರಘುಪತಿ ಭಟ್‌, ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌, ಉದ್ಯಮಿ ಹಾಗೂ ಹುಬ್ಬಳ್ಳಿ ಧಾರವಾಡ ಬಂಟರ ಸಂಘದ ಅಧ್ಯಕ್ಷ ಸುಗ್ಗಿ ಸುಧಾಕರ ಶೆಟ್ಟಿ, ಉದ್ಯಮಿಗಳಾದ ಆರೂರು ಶ್ರೀಧರ ಶೆಟ್ಟಿ, ಹುಬ್ಬಳ್ಳಿಯ ರಾಜೇಂದ್ರ ಶೆಟ್ಟಿ, ಶಾಂತರಾಮ ಶೆಟ್ಟಿ, ಪ್ರಸಾದ್‌ರಾಜ್‌ ಕಾಂಚನ್‌, ಡಿಡಿಪಿಐ ಗಣಪತಿ ಕೆ, ಬ್ರಹ್ಮಾವರದ ಬಿಇಓ ರಂಗನಾಥ ಕೆ, ಶಿಕ್ಷಕರ ಸಂಘದ ಕೆ.ದಿನಕರ ಶೆಟ್ಟಿ ಅಂಪಾರು, ಬೈಂದೂರಿನ ಶೇಖರ ಪೂಜಾರಿ, ಕುಂದಾಪುರದ ಗಣೇಶ ಕುಮಾರ ಶೆಟ್ಟಿ, ಬ್ರಹ್ಮಾವರದ ಶಾಂತರಾಜ ಶೆಟ್ಟಿ, ಕಾರ್ಕಳದ ರಮಾನಂದ ಶೆಟ್ಟಿ, ಅರುಣ್‌ ಕುಮಾರ ಶೆಟ್ಟಿ, ಬ್ರಹ್ಮಾವರ ಸ್ಪೋರ್ಟ್ಸ್‌ ಕ್ಲಬ್‌ ಅಧ್ಯಕ್ಷ ಚಂದ್ರಶೇಖರ ಹೆಗ್ಡೆ ಇದ್ದರು.

ಸಮಾರಂಭದಲ್ಲಿ ಬಸವರಾಜ ಹೊರಟ್ಟಿ ಅವರನ್ನು ಶಿಕ್ಷಕರ ಸಂಘದ ವತಿಯಿಂದ ಗೌರವಿಸಲಾಯಿತು. ಸಂಘಟನೆಯ ವತಿಯಿಂದ ಸಂಘದ ಮಾಜಿ ಅಧ್ಯಕ್ಷ ಸುಬ್ರಹ್ಮಣ್ಯ ಶೇರಿಗಾರ್‌, ಬ್ರಹ್ಮಾವರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪಪ್ರಾಂಶುಪಾಲ ಬಿ.ಟಿ.ನಾಯ್ಕ ಅವರನ್ನು ಸನ್ಮಾನಿಸಲಾಯಿತು. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಶೇ 85  ಕ್ಕಿಂತ ಅಧಿಕ ಅಂಕ ಪಡೆದ ಶಿಕ್ಷಕರ ಮಕ್ಕಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು.

ಇದಕ್ಕೂ ಮುನ್ನ ಶಿಕ್ಷಕ ದಂಪತಿಗಳಿಗೆ ಆದರ್ಶ ದಂಪತಿ ಸ್ಪರ್ಧೆ ಮತ್ತು ಕನ್ನಡ ಮಾಧ್ಯಮ ಶಾಲೆಗಳ ಸವಾಲುಗಳು ಮತ್ತು ಪರಿಹಾರ ಹಾಗೂ ಹೊಸ ಶಿಕ್ಷಣ ನೀತಿ ಬಗ್ಗೆ ಸಂಪನ್ಮೂಲ ವ್ಯಕ್ತಿ ಆರೂರು ತಿಮ್ಮಪ್ಪ ಶೆಟ್ಟಿ ಉಪನ್ಯಾಸ ನೀಡಿದರು.

ಸಂಘದ ಅಧ್ಯಕ್ಷ ಪ್ರಶಾಂತ್‌ ಶೆಟ್ಟಿ ಹಾವಂಜೆ ಸ್ವಾಗತಿಸಿದರು. ರವಿ ಎಸ್‌ ಪೂಜಾರಿ ಬೈಕಾಡಿ ವಂದಿಸಿದರು. ಶಿಕ್ಷಕರಾದ ಸುಬ್ರಹ್ಮಣ್ಯ ಉಪ್ಪುಂದ ಮತ್ತು ಶಶಿಧರ ಶೆಟ್ಟಿ ನಂಚಾರು ಕಾರ್ಯಕ್ರಮ ನಿರೂಪಿಸಿದರು.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com