ಬೆಂಗಳೂರು: ಜೆಡಿಎಸ್‌ನ ಪಂಚರತ್ನ ರಥಯಾತ್ರೆ ಬಗ್ಗೆ ಲೇವಡಿ ಮಾಡಿರುವ ಸಚಿವ ಪ್ರಲ್ಹಾದ್ ಜೋಶಿ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್ ಡಿ ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಂಚರತ್ನ ಯಾತ್ರೆಗೆ ಜನರ ಸ್ಪಂದನೆಯನ್ನು ಕಂಡು ಹೆದರಿದ್ದಾರೆ. ಅದಕ್ಕೇ ಹೀಗೆಲ್ಲಾ ಹೇಳಿಕೆ ಬರುತ್ತಿವೆ ಎಂದರು.
ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಪಂಚರತ್ನ ರಥಯಾತ್ರೆ ನಡೆಸಿ ಮಾತನಾಡಿದ ಅವರು, ಪ್ರಹ್ಲಾದ್ ಜೋಶಿ ಚುನಾವಣೆ ನಂತರ ಸಿಎಂ ಮಾಡಬೇಕು ಎಂದು ಸಂಘ ಪರಿವಾರದವರು ನಿರ್ಧಸಿದಿದ್ದಾರೆ. ಜೋಶಿ ಅವರು ನಮ್ಮ ಭಾಗದ ಹಳೆಯ ಕಾಲದ ಬ್ರಾಹ್ಮಣರಲ್ಲ. ಬ್ರಾಹ್ಮಣರಲ್ಲಿ ಎರಡು ಮೂರು ವಿಧಗಳಿವೆ. ಶೃಂಗೇರಿ ಮಠ ಒಡೆದ ಬ್ರಾಹ್ಮಣ ವರ್ಗ ಜೋಶಿ ಅವರದ್ದು. ಮಹಾತ್ಮ ಗಾಂಧಿ ಅವರನ್ನು ಕೊಂದ ಬ್ರಾಹ್ಮಣರು ಇವರೇ ಎಂದು ಹೊಸ ಬಾಂಬ್ ಹಾಕಿದ್ದಾರೆ.

ಇವರು ಶೃಂಗೇರಿ ಮಠಕ್ಕೆ ಸೇರಿದವರಲ್ಲ. ಮರಾಠಿ ಪೇಶ್ವೆ ಸಮುದಾಯಕ್ಕೆ ಸೇರಿದವರು. ಇವರು ಶೃಂಗೇರಿ ಮಠವನ್ನು ಒಡೆದವರು. ನಮ್ಮ ಭಾಗದ ಹಳೇ ಬ್ರಾಹ್ಮಣರು ಸರ್ವೇಜನ ಸುಖಿನೋ ಭವಂತು ಅನ್ನುವವರು. ಎಲ್ಲರ ಕ್ಷೇಮ ಬಯಸುವವರು. ಆದ್ರೆ ಇವರು ದೇಶ ಒಡೆಯುವ, ದೇಶಕ್ಕೆ ಕೊಡುಗೆ ನೀಡಿದವರನ್ನ ಹತ್ಯೆ ಮಾಡಿದವರು ಎಂದು ಆರೋಪಿಸಿದರು.
ಬಿಜೆಪಿ ಹುನ್ನಾರ, ಆರ್ಎಸ್ಎಸ್ ಕುತಂತ್ರಕ್ಕೆ ಬಲಿಯಾಗಬೇಡಿ. ಇವರು ದೇಶವನ್ನ ಹಾಳು ಮಾಡ್ತಾರೆ. ದೆಹಲಿಯಲ್ಲಿ ಎಂಟು ಜನ ಉಪ ಮುಖ್ಯಮಂತ್ರಿ ಮಾಡುವ ಸಭೆ ಮಾಡಿದ್ದಾರೆ. ಅದು ನನ್ನ ಗಮನಕ್ಕೆ ಬಂದಿದೆ. ಎಂಟು ಜನ ಯಾರು ಎಂದು ಹೆಸರು ಬೇಕಾದ್ರೂ ಕೊಡ್ತೀನಿ ಎಂದು ಹೆಚ್ಡಿಕೆ ಹೇಳಿದರು




