Breaking News

ಕ್ಯಾಂಟಿನ್ ನಡೆಸಲು ಕಾನೂನುಬಾಹಿರ ಗುತ್ತಿಗೆ:  ಕಾಂಗ್ರೆಸ್ ಪ್ರತಿಭಟನೆ

 

ಮೂಡುಬಿದಿರೆ: ಇಲ್ಲಿನ ತಾಲ್ಲೂಕು ಕಚೇರಿ ಬಳಿಯಿರುವ ಹಳೆ ಪಡಸಾಲೆ ಕಟ್ಟಡವನ್ನು ಬಿಜೆಪಿ ಕಾರ್ಯಕರ್ತರೊಬ್ಬರಿಗೆ  ಕ್ಯಾಂಟಿನ್ ನಡೆಸಲು ತಹಶೀಲ್ದಾರ್ ಕಾನೂನು ಬಾಹಿರವಾಗಿ ಗುತ್ತಿಗೆ ನೀಡಲು ಮುಂದಾಗಿರುವುದನ್ನು ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ಬುಧವಾರ ತಾಲ್ಲೂಕು ಆಡಳಿತ ಸೌಧದ ಎದುರು ಪ್ರತಿಭಟನೆ ನಡೆಸಿದರು.

ಮಾಜಿ ಸಚಿವ ಅಭಯಚಂದ್ರ ಜೈನ್ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿ,  ಕ್ಯಾಂಟಿನ್ ಗುತ್ತಿಗೆಯನ್ನು ಬಿಜೆಪಿ ಕಾರ್ಯಕರ್ತನಿಗೆ ನೀಡುವ ಉದ್ದೇಶದಿಂದ ಈ ಬಗ್ಗೆ ಕರೆಯಲಾದ ಸಾರ್ವಜನಿಕ ಟೆಂಡರ್‌ನಲ್ಲಿ ತಹಶೀಲ್ದಾರ್ ಗೌಪ್ಯತೆಯನ್ನು ಕಾಯ್ದಕೊಂಡಿದ್ದರು. ಆದರೂ ವಿಷಯ ತಿಳಿದು ಕಾಂಗ್ರೆಸ್ ಕಾರ್ಯಕರ್ತರೊಬ್ಬರು ಕೂಡ ಅರ್ಜಿ ಸಲ್ಲಿಸಿದ್ದರೂ ತಹಶೀಲ್ದಾರ್ ಅವರು ಶಾಸಕರ ಸೂಚನೆಯಂತೆ ಬಿಜೆಪಿ ಕಾರ್ಯಕರ್ತರೊಬ್ಬರ ಅರ್ಜಿಯನ್ನು ಸಿಂಧುಗೊಳಿಸಿ ಕ್ಯಾಂಟೀನ್ ಗುತ್ತಿಗೆ ನೀಡಲು ಮುಂದಾಗಿದ್ದಾರೆ ಎಂದರು.

  1.  

ಈ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರ ನಡೆದಿರುವ ಅನುಮಾನ ವ್ಯಕ್ತವಾಗಿದೆ. ತಾಲ್ಲೂಕು ಕಚೇರಿ ವಿರುದ್ಧ ಈಗಾಗಲೇ ಸಾರ್ವಜನಿಕರಿಂದ ಭ್ರಷ್ಟಾಚಾರದ ಆರೋಪ ಕೇಳಿಬರುತ್ತಿದ್ದು ಪಡಸಾಲೆಯಲ್ಲಿ ಆರಂಭವಾಗಲಿರುವ ಕ್ಯಾಂಟೀನನ್ನು ಆಡಳಿತ ಸೌಧದ ಕಲೆಕ್ಷನ್ ಸೆಂಟರನ್ನಾಗಿ ಮಾಡುವ ಸಾಧ್ಯತೆಯಿದೆ. ಕ್ಯಾಂಟೀನ್ ಗುತ್ತಿಗೆ ನೀಡುವ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ಮಾಡದಿದ್ದಲ್ಲಿ ಕಾಂಗ್ರೆಸ್ ಪ್ರತಿಭಟನೆಯನ್ನು ಮುಂದುವರಿಸಲಿದೆ ಎಂದು ಅವರು ಎಚ್ಚರಿಸಿದರು.

ಸಿದ್ಧರಾಮಯ್ಯ ಸರಕಾರ ಇರುವಾಗ ಕಮಿಷನ್ ದಂಧೆ ಇರಲಿಲ್ಲ. ತಾನು ನಾಲ್ಕು ಬಾರಿ ಶಾಸಕನಾಗಿದ್ದಾಗಲೂ ಯಾವುದೇ ಇಲಾಖೆಯ ಅಧಿಕಾರಿಗಳು ಭ್ರಷ್ಟಾಚಾರ ನಡೆಸಲು ಅವಕಾಶ ನೀಡಿಲ್ಲ. ಅಭಿವೃದ್ದಿ ಕಾಮಗಾರಿಗಳ ನೆಪದಲ್ಲಿ 40 ಶೇ ಕಮೀಷನ್ ದಂಧೆ ನಡೆಯುತ್ತಿದೆ. ಆಡಳಿತ ಸೌಧ ನಿರ್ಮಾಣದಲ್ಲಿಯೂ ದಂಧೆ ನಡೆದಿದೆ. ನೂರು ವರ್ಷಗಳ ಇತಿಹಾಸವಿರುವ ಪ್ರವಾಸಿ ಬಂಗ್ಲೆಗೆ ಕಳೆದ ಬಾರಿ 10ಲಕ್ಷ ಖರ್ಚು ಮಾಡಿ ರಿಪೇರಿ ಮಾಡಲಾಗಿದೆ. ಇದೀಗ 5 ಕೋ.ವೆಚ್ಚದ ಹೊಸ ಕಟ್ಟಡಕ್ಕೆ ಟೆಂಡರ್ ಆಗಿದೆ. ಶಾಸಕರು ಮಂಗಳೂರಿನಲ್ಲಿಯೇ ಕುಳಿತುಕೊಂಡು ವ್ಯವಹಾರ ನಡೆಸಲು ಮುಂದಾಗಿದ್ದಾರೆ ಎಂದು ಆರೋಪಿಸಿದ ಜೈನ್, ಇದೀಗ ಸಾಂಕೇತಿಕವಾಗಿ ಪ್ರತಿಭಟನೆ ನಡೆಸುತ್ತಿದ್ದೇವೆ ಮುಂದಿನ ದಿನಗಳಲ್ಲಿ ತಹಶೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಲೇರಿಯನ್ ಸಿಕ್ವೇರ, ಮಹಿಳಾ ಘಟಕದ ಅಧ್ಯಕ್ಷೆ ಸುಪ್ರಿಯಾ ಡಿ. ಶೆಟ್ಟಿ, ಪುತ್ತಿಗೆ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರವೀಣ್ ಶೆಟ್ಟಿ, ಎಪಿಎಂಸಿ ಸದಸ್ಯ ಚಂದ್ರಹಾಸ ಸನಿಲ್, ಮಾಜಿ ಸದಸ್ಯ ವಾಸುದೇವ ನಾಯಕ್, ಪುರಸಭಾ ಸದಸ್ಯರಾದ ಸುರೇಶ್ ಕೋಟ್ಯಾನ್, ಸುರೇಶ್ ಪ್ರಭು, ಕೊರಗಪ್ಪ, ಇಕ್ಬಾಲ್ ಕರೀಂ, ಪುರಂದರ ದೇವಾಡಿಗ, ಜೊಸ್ಸಿ ಮಿನೇಜಸ್, ಹಿಮಾಯಿತ್ತುಲ್ಲಾ, ಕಾಂಗ್ರೆಸ್ ವಕ್ತಾರ ರಾಜೇಶ್ ಕಡಲಕೆರೆ, ಪ್ರಮುಖರಾದ ರಾಘು ಪೂಜಾರಿ, ಮಹ್ಮದ್ ಅಸ್ಲಂ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com