Breaking News

ಹೃದಯಾಫಾತ ಸೂಚಕ ಕಿಣ್ವಗಳು…ಹೃದಯ ಬಡಿತ ನಿಲ್ಲಿಸುತ್ತಾ ಈ ಲೇಖನ ಒಮ್ಮೆ ಓದಿ

 

ಡಾ. ಮುರಲಿ ಮೋಹನ್ ಚೂಂತಾರು

ಹೃದಯ ನಮ್ಮ ದೇಹದ ಅತೀ ಪ್ರಾಮುಖ್ಯ ಅಂಗ, ನಿರಂತರವಾಗಿ ಕೆಲಸ ಮಾಡುತ್ತಲೇ ಇರುತ್ತದೆ. ಇಂತಹ ಹೃದಯಕ್ಕೆ ಆಫಾತವಾಗಿ ಹೃದಯದ ಸ್ನಾಯುಗಳಿಗೆ ರಕ್ತದ ಪೂರೈಕೆ ನಿಂತು ಹಾನಿಯಾದಾಗ, ರಕ್ತದಲ್ಲಿ ಕೆಲವೊಂದು ಕಿಣ್ವಗಳು ಏರಿಕೆಯಾಗುತ್ತದೆ. ಹೃದಯದ ಘಾಸಿಗೊಂಡ ಸ್ನಾಯುಗಳಿಂದ ಬಿಡುಗಡೆಯಿಂದ ಈ ಕಿಣ್ವಗಳನ್ನು ಕಾರ್ಡಿಯಾಕ್ ಮಾರ್ಕರ್ ಅಥವಾ ಹೃದಯಾಘಾತ ಸೂಚಕ ಕಿಣ್ವಗಳು ಎಂದೂ ಕರೆಯುತ್ತಾರೆ.

ಹೃದಯಾಫಾತ ಆದ ಕೂಡಲೇ ಈ ಕಿಣ್ವಗಳು ವಿಪರೀತವಾಗಿ ಏರಿಕೆ ಕಾಣುತ್ತದೆ. ಹೃದಯದ ಆಘಾತದ ಲಕ್ಷಣಗಳಾದ ಎದೆನೋವು, ಎದೆಯಲ್ಲಿ ಹಿಡಿದುಕೊಂಡ ಅನುಭವ, ತಲೆ ಸುತ್ತಿದಂತಾಗುವುದು, ವಿಪರೀತ ಸುಸ್ತಾದಂತೆ ಅನಿಸುವುದು. ಉಸಿರಾಟವಾಡಲು ಕಷ್ಟವಾಗುವುದು. ಬೆವರಿಕೆ, ಚರ್ಮ ತಣ್ಣಗಾಗಿ ಬಿಳಿಚಿಕೊಂಡಿರುವುದು ಮುಂತಾದ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣವೇ ವೈದ್ಯರು ಈ ಪರೀಕ್ಷೆ ಮಾಡಿಸಲು ಆದೇಶಿಸುತ್ತಾರೆ. ಹೃದಯಾಘಾತವಾದ ಬಳಿಕ ಒಂದೆರಡು ಗಂಟೆಗಳಲ್ಲಿ ಏರಿಕೆ ಕಾಣುವ ಈ ಕಿಣ್ವಗಳು, ಒಂದರಿಂದ ಎರಡು ವಾರಗಳವರೆಗೆ ರಕ್ತದಲ್ಲಿ ಏರಿಕೆ ಕಂಡು ಬರುತ್ತದೆ.

ಏನಿದು ಕಿಣ್ವಗಳು?: ಟ್ರೊಪೊನಿನ್, ಮಯೋಗ್ಲೊಬಿನ್ ಮತ್ತು ಕ್ರಿಯಾಟಿನ್ ಕೈನೇಸ್ ಎಂಬ ಮೂರು ಕಿಣ್ವಗಳನ್ನು ಹೃದಯಾಘಾತ ಸೂಚಕ ಕಿಣ್ವಗಳು ಎಂದು ಕರೆಯುತ್ತಾರೆ. ಈ ಹಿಂದೆ ಎಲ್ ಡಿಎಚ್ ಅಥವಾ ಲಾಕ್ಟೇಟ್ ಡಿಹೈಡ್ರೋಜನೇಸ್ ಎಂಬ ಕಿಣ್ವವನ್ನು ಕೂಡ ಹೃದಯಾಘಾತ ಸೂಚಕ ಕಿಣ್ವ ಎನ್ನಲಾಗುತ್ತಿತ್ತು. ಆದರೆ, ಇತರ ಬೇರೆ ರೋಗಗಳಲ್ಲಿಯೂ ಈ ಕಿಣ್ವಗಳು ಏರಿಕೆಯಾಗುವುದರಿಂದ ಈಗ ಈ ಕಿಣ್ವವನ್ನು ಪರಿಗಣಿಸಲಾಗುವುದಿಲ್ಲ.

  1.  

ಟ್ರೊಪೊನಿನ್: ಇದೊಂದು ಪ್ರೋಟಿನ್ ಆಗಿದ್ದು ಹೃದಯದ ಸ್ನಾಯುಗಳ ಕಾರ್ಯಶೀಲತೆಗೆ ಅತೀ ಅಗತ್ಯವಾಗಿರುತ್ತದೆ. ಹೃದಯಾಘಾತವಾಗಿ ಹೃದಯದ ಸ್ನಾಯುಗಳಿಗೆ ರಕ್ತದ ಪೂರೈಕೆ ನಿಂತು ಹೋಗಿ ಘಾಸಿಯಾದಾಗ ಈ ಟ್ರೊಪೊನಿನ್ ಪ್ರೋಟಿನ್ ರಕ್ತದಲ್ಲಿ 3 ರಿಂದ 4 ಗಂಟೆಗಳ ಒಳಗೆ ಏರಿಕೆಯಾಗುತ್ತದೆ. ಸುಮಾರು 15 ದಿನಗಳವರೆಗೆ ಈ ಏರಿಕೆ ರಕ್ತದಲ್ಲಿ ಕಂಡು ಬರುತ್ತದೆ. ಬೇರೆ ಇತರ ಕಾರಣಗಳಿಂದಲೂ ಈ ಕಿಣ್ವ ಏರಿಕೆ ಆಗುವ ಸಾಧ್ಯತೆ ಇದ್ದರೂ, ಹೃದಯದ ಅಘಾತವನ್ನು ಪತ್ತೆ ಹಚ್ಚಲು ಇದು ಬಹಳ ಉಪಯುಕ್ತ ಎಂದು ತಿಳಿದು ಬಂದಿದೆ.

ಕ್ರಿಯಾಟಿನ್ ಕೈನೇಸ್: ಇದನ್ನು ಕ್ರಿಯಾಟಿನ್ ಫಾಸ್ಫೋಕೈನೇಸ್ ಅಥವಾ ಸಿಪಿಕೆ ಕಿಣ್ವ ಎಂದೂ ಕರೆಯುತ್ತಾರೆ. ಈ ಕಿಣ್ವಗಳು ಹೃದಯಾಘಾತವಾದಾಗ ಬೇಗನೆ ಏರಿಕೆ ಕಾಣುತ್ತದೆ. ದೇಹದ ಇತರ ಭಾಗದ ಸ್ನಾಯುಗಳಿಗೆ ಮತ್ತು ಮೆದುಳಿನ ಜೀವಕೋಶಗಳಿಗೆ ಹಾನಿಯಾದಾಗ ಕೂಡಾ ಈ ಕಿಣ್ವ ಏರಿಕೆ ಕಾಣುವ ಸಾಧ್ಯತೆ ಇದೆ. 3ರಿಂದ 4 ಗಂಟೆಗಳ ಬಳಿಕ ರಕ್ತದಲ್ಲಿ ಏರಿಕೆ ಕಂಡು, 3 ರಿಂದ 4 ದಿನಗಳವರೆಗೆ ರಕ್ತದಲ್ಲಿ ಕಂಡು ಬರುತ್ತದೆ.

ಮಯೋಗ್ಲೊಬಿನ್: ದೇಹದ ಎಲ್ಲಾ ಸ್ನಾಯುಗಳಿಗೆ ಘಾಸಿಯಾದಾಗ ಈ ಕಿಣ್ವ ಕೇವಲ 30 ನಿಮಿಷಗಳಲ್ಲಿ ಏರಿಕೆ ಕಾಣುತ್ತದೆ. ಬರೀ ಹೃದಯದ ಸ್ನಾಯುಗಳಿಗೆ ಇದು ಸೂಚಕವಲ್ಲ. ದೇಹದ ಎಲ್ಲಾ ಸ್ನಾಯುಗಳಿಗೂ ಇದು ಅನ್ವಯವಾಗುತ್ತದೆ. ಇತರ ಮೇಲೆ ತಿಳಿಸಿದ ಎರಡು ಕಿಣ್ವಗಳು 2 ರಿಂದ 3 ಗಂಟೆಗಳ ಬಳಿಕ ರಕ್ತದಲ್ಲಿ ಕಾಣಿಸಿದರೆ ಈ ಕಿಣ್ವ ಹೃದಯಾಘಾತವಾಗಿ 30 ನಿಮಿಷದ ಒಳಗೆ ಏರಿಕೆ ಕಾಣುತ್ತದೆ. ಈ ಕಾರಣದಿಂದ ತಕ್ಷಣವೇ ಕಂಡುಹಿಡಿಯಲು ಈ ಪರೀಕ್ಷೆ ಉಪಯೋಗವಾಗುತ್ತದೆ.

ಹೇಗೆ ಪರೀಕ್ಷೆ ಮಾಡಲಾಗುತ್ತದೆ?: ತೋಳಿನ ರಕ್ತನಾಳದಿಂದ ಕೇವಲ 5 ಎಂಎಲ್  ರಕ್ತ ತೆಗೆಯಲಾಗುತ್ತದೆ. ಮತ್ತು ಎರಡು ಗಂಟೆಗಳ ಒಳಗೆ ಫಲಿತಾಂಶ ತಿಳಿಯುತ್ತದೆ. ಆರೋಗ್ಯವಂತ ವ್ಯಕ್ತಿಯ ರಕ್ತದಲ್ಲಿ ಟ್ರೊಪೊನಿನ್ ಟಿ ಎಂಬ ಕಿಣ್ವ ಇರುವುದಿಲ್ಲ. ಆದರೆ ಈ ಕಿಣ್ವಗಳು ಏರಿಕೆಯಾದ್ದಲ್ಲಿ ವೈದ್ಯರು ಹೃದಯಾಘಾತವನ್ನು ಸಂಶಯಿಸುತ್ತಾರೆ. ಅಘಾತದ ತೀವ್ರತೆ ಹೆಚ್ಚಾದಂತೆ ಈ ಕಿಣ್ವಗಳು ಕೂಡ ರಕ್ತದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತವೆ. ಈ ಪರೀಕ್ಷೆ ನಡೆಸುವ ಮೊದಲು ಯಾವುದೇ ಪೂರ್ವ ಸಿದ್ಧತೆ ಅಥವಾ ಖಾಲಿ ಹೊಟ್ಟೆಯಲ್ಲಿ ಇರಬೇಕು ಎಂಬ ಅನಿವಾರತ್ಯೆ ಇಲ್ಲ. ಹೃದಯಾಘಾತ ಅಲ್ಲದೆ ಇತರ ಕಾರಣಗಳಿಂದಲೂ ಈ ಕಿಣ್ವಗಳು ರಕ್ತದಲ್ಲಿ ಏರಿಕೆ ಕಾಣುವ ಸಾಧ್ಯತೆ ಇರುತ್ತದೆ. ಉದಾಹರಣೆ ರಕ್ತದಲ್ಲಿ ಸೋಂಕು, ಮೆದುಳಿನ ಜೀವಕೋಶಗಳಿಗೆ ಹಾನಿ ಮತ್ತು ಹೃದಯದ ಕವಾಟಗಳಿಗೆ ಸಂಬಂಧಿಸಿದ ಕಾಯಿಲೆ ಇತ್ಯಾದಿ. ಈ ಕಾರಣದಿಂದ ವೈದ್ಯರು ರೋಗಿಯ ಚರಿತ್ರೆ, ರೋಗದ ಲಕ್ಷಣ, ಮತ್ತು ಇತರ ಎಲ್ಲಾ ಪರೀಕ್ಷೆಗಳನ್ನು ನಡೆಸಿ, ತಾಳೆ ಹಾಕಿ ರೋಗ ನಿರ್ಣಯ ಮಾಡುತ್ತಾರೆ. ಪ್ರಾಥಮಿಕ ಹೃದಯ ಪರೀಕ್ಷೆಗಳಾದ ECG ಮತ್ತು ಎಕೋಕಾರ್ಡಿಯೋಗ್ರಾಂ ಎಂಬ ಪರೀಕ್ಷೆ ಮುಖಾಂತರ ಹೃದಯಕ್ಕೆ ಉಂಟಾದ ಹಾನಿಯ ಪ್ರಮಾಣ ಮತ್ತು ತೀವ್ರತೆಯನ್ನು ಅಂದಾಜಿಸುತ್ತಾರೆ.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com