Breaking News

ಮೆಮು ರೈಲು ನಿಲುಗಡೆಗೆ ಆಗ್ರಹಿಸಿ ಹಳಿ ಮೇಲೆ ಮಲಗಿ ವಿನೂತನ ಪ್ರತಿಭಟನೆ

 

ಕರಾವಳಿ ಡೈಲಿನ್ಯೂಸ್

ಅಂಕೋಲಾ: ಮೆಮು ರೈಲು ಅನ್ನು ಅಂಕೋಲಾದ ಹಾರವಾಡ, ಕುಮಟಾದ ಮಿರ್ಜಾನ, ಭಟ್ಕಳದ ಚಿತ್ರಾಪುರದಲ್ಲಿ ನಿಲುಗಡೆ ಮಾಡುವುದು, ಹಾರವಾಡ ರೈಲು ನಿಲ್ದಾಣದ ಪ್ಲಾಟ್‍ಫಾರ್ಮ್ ಹೈಲೇವಲ್‍ಗೆ ಅಭಿವೃದ್ಧಿ ಮಾಡಬೇಕು ಎಂದು ಒತ್ತಾಯಿಸಿ ಜನಶಕ್ತಿ ವೇದಿಕೆ ನೇತೃತ್ವದಲ್ಲಿ ಸೋಮವಾರ ಹಾರವಾಡ ರೈಲ್ವೆ ನಿಲ್ದಾಣದಲ್ಲಿ ಮಂಗಳೂರು- ಮಡಗಾಂವ್ ಪ್ಯಾಸೇಜರ್ ರೈಲು ನಿಲುಗಡೆ ಮಾಡಿ ಪದ್ಮಶ್ರೀ ಪುರಸ್ಕೃತರಾದ ಸುಕ್ರಿ ಗೌಡ, ತುಳಿಸಿ ಗೌಡ ಅವರ ಮುಂದಾಳತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನಾ ಸ್ಥಳಕ್ಕೆ ಬಿ.ಬಿ.ನಿಕ್ಕಂ ಬಂದು ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿ, 10 ದಿನದೊಳಗಾಗಿ ನಿಮ್ಮ ಬೇಡಿಕೆಗಳನ್ನು ಈಡೇರಿಸಲಾಗುತ್ತದೆ ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ವಾಪಸ್ ಪಡೆಯಲಾಯಿತು.

ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ಬಿ.ನಾಯಕ ಅವರು ಮಾತನಾಡಿ, ತಾಲೂಕಿನ ಅವರ್ಸಾ, ಹಾರವಾಡ, ಬೇಲೆಕೇರಿ, ಕಾರವಾರ ತಾಲೂಕಿನ ಚೆಂಡಿಯಾ,ತೋಡೂರು ಹೀಗೆ ಮೊದಲಾದ ಗ್ರಾಮದ ಜನರು ಹಾರವಾಡ ರೈಲ್ವೆ ನಿಲ್ದಾಣದ ಮೇಲೆ ಅವಲಂಬಿತರಾಗಿದ್ದಾರೆ. ಈ ಹಿನ್ನಲೆಯಲ್ಲಿ ಹೊಸದಾಗಿ ಆರಂಭವಾಗಿರುವ ಮೆಮು ರೈಲನ್ನು ನಿಲುಗಡೆ ಮಾಡಬೇಕು. ಇದರಿಂದಾಗಿ ಸ್ಥಳೀಯರಿಗೆ ಮಣಿಪಾಲ, ಉಡುಪಿ, ಮಂಗಳೂರು ಸೇರಿದಂತೆ ವಿವಿಧ ಊರುಗಳಿಗೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ತೆರಳಲು ಅನುಕೂಲ ಆಗುತ್ತದೆ ಎಂದರು.

  1.  

ಮಾಜಿ ಶಾಸಕ ಸತೀಶ ಕೆ.ಸೈಲ್ ಮಾತನಾಡಿ, ಕೇವಲ ಟಿಕೆಟ್ ದರ ಹೆಚ್ಚಿಗೆ ಮಾಡುವ ನೆಪದಲ್ಲಿ ಎಕ್ಸ್ಪ್ರೆಸ್ ಅಂತ ಹೇಳಿ ಪ್ರಯಾಣಿಕರಿಗೆ ತೊಂದರೆ ಕೊಡುವುದು ಸರಿಯಲ್ಲ. ನಿಲ್ದಾಣದ ಕಚೇರಿಯಲ್ಲಿ ಉಪಸ್ಥಿತರಿದ್ದ ಕೊಂಕಣ ರೇಲ್ವೆ ನಿಗಮದ ವಿಭಾಗೀಯ ವ್ಯವಸ್ಥಾಪಕರನ್ನು ಕರೆಯಿಸಿ ಈ ನಿಲ್ದಾಣದಲ್ಲಿ ಮೆಮು ರೇಲ್ವೆ ನಿಲುಗಡೆ ಆಗಬೇಕು ಮತ್ತು ರೈಲಿಗಾಗಿ ಭೂಮಿಯನ್ನು ತ್ಯಾಗ ಮಾಡಿದವರಿಗೆ ಸೂಕ್ತ ಪರಿಹಾರ ಕೂಡ ಸಿಕ್ಕಿಲ್ಲ. ಅದನ್ನು ಸಹ ಮುಂದಿನ ದಿನಗಳಲ್ಲಿ ನೀಡುವಂತೆ ಆಗಬೇಕು. ಇಲ್ಲದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.

ರೈಲ್ವೆ ಹೋರಾಟ ಸಮಿತಿ ಕಾರ್ಯದರ್ಶಿ ರಾಜೀವ್ ಗಾಂವಕರ್ ಹಿರೇಗುತ್ತಿ ಅವರು ಮಾತನಾಡಿ, ಕೊಂಕಣಿ ರೈಲ್ವೆ  ಆರಂಭವಾಗಿ ಇದೇ 26 ಕ್ಕೆ 32 ವರ್ಷ ಆಗುತ್ತದೆ. ಆದರೆ, ನಮ್ಮಉತ್ತರ ಕನ್ನಡಕ್ಕೆ ರೈಲ್ವೆ ಸೌಲಭ್ಯಗಳನ್ನು ಹೋರಾಟ ಮಾಡಬೇಕಾದ ಅನಿವಾರ್ಯತೆ ಬಂದಿದೆ. ಕೊಂಕಣ ರೈಲ್ವೆ ಮಾರ್ಗದಲ್ಲಿ 66 ರೈಲುಗಳು ಸಂಚಾರ ಮಾಡುತ್ತವೆ. ಆದರೆ, ಜಿಲ್ಲೆಗೆ 5 ರೈಲುಗಳ ಸೇವೆ ಮಾತ್ರ ಸಿಗುತ್ತಿದೆ ಎಂದರು.

ರೈಲ್ವೆ ಹೋರಾಟ ಸಮಿತಿ ಅಧ್ಯಕ್ಷ ಜಾರ್ಜ್ ಫರ್ನಾಂಡಿಸ್, ನಿವೃತ್ತ ಶಿಕ್ಷಕ ವೆಂಟು ಮಾಸ್ತರ, ಗ್ರಾಮ ಪಂಚಾಯಿತಿ ಸದಸ್ಯ ಮಾರುತಿ ನಾಯ್ಕ, ಗೋವಿಂದರಾಜು ಸೇರಿದಂತೆ ಹಲವರು ಮಾತನಾಡಿದರು.

ಈ ಸಂದರ್ಭದಲ್ಲಿ ಪದ್ಮಶ್ರೀ ಪುರಸ್ಕೃತರಾದ ಸುಕ್ರಿ ಗೌಡ, ತುಳಿಸಿ ಗೌಡ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ವಿನೋದ ಗಾಂವಕರ ಸೇರಿದಂತೆ ಹಲವರು ಇದ್ದರು.

 

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com