Breaking News

ಹೆಬ್ರಿ ಎಸ್.ಆರ್‌ ಶಿಕ್ಷಣ ಸಂಸ್ಥೆ ಆದರ್ಶ ಶಿಕ್ಷಣ ಸಂಸ್ಥೆ: ಆರಗ ಜ್ಞಾನೇಂದ್ರ

 

ಕರಾವಳಿ ಡೈಲಿನ್ಯೂಸ್

ಹೆಬ್ರಿ: ಕಠಿಣ ಶ್ರಮದಿಂದ ಹೆಬ್ರಿಯಂತಹ ಗ್ರಾಮೀಣ ಪ್ರದೇಶದಲ್ಲಿ ಎಸ್ ಆರ್.ಸಮೂಹ ಶಿಕ್ಷಣ ಸಂಸ್ಥೆ ಯಶಸ್ಸಿನತ್ತ ಮುನ್ನಡೆಯುತ್ತಿದೆ. ಇದು ಸಾರ್ಥಕ ಭಾವನೆಯನ್ನು ಮೂಡಿಸುತ್ತದೆ, 2,500 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿರುವುದು ಸಂಸ್ಥೆಯು ಮಾದರಿ ಎನ್ನುವುದಕ್ಕೆ ಸಾಕ್ಷಿ ಆಗಿದೆ, ನಮಗೆಲ್ಲರಿಗೂ ಎಸ್ ಆರ್.ಸಮೂಹ ಶಿಕ್ಷಣ ಸಂಸ್ಥೆ ಬಗ್ಗೆ ಅಪಾರ ಅಭಿಮಾನ ಇದೆ ಎಂದು ಗೃಹಸಚಿವ ಆರಗ ಜ್ಞಾನೇಂದ್ರ ಹೇಳಿದರು.

ಹೆಬ್ರಿಯ ಎಸ್ ಆರ್.ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ನಡೆದ 24 ನೇ ವಾರ್ಷಿಕೋತ್ಸವ – ಎಸ್ ಆರ್‌ ಸೌರಭ ಸಂಭ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಾಜಕಾರಣಿಗಳಿಂದ ದೇಶ ಬದಲಾಗಲು ಸಾಧ್ಯವಿಲ್ಲ. ಶಿಕ್ಷಣ ಮತ್ತು ಶಿಕ್ಷಣ ಪಡೆದ ಯುವ ಸಮುದಾಯದಿಂದ ಮಾತ್ರ ದೇಶದಲ್ಲಿ ಬದಲಾವಣೆ ಕಾಣಲು ಸಾಧ್ಯ. ಬದುಕು ಬದಲಾಯಿಸುವ ಶಕ್ತಿ ಶಿಕ್ಷಣಕ್ಕೆ ಇದೆ. ಎಸ್ ಆರ್.‌ ಸಂಸ್ಥೆ ಸಾವಿರಾರು ಯುವ ಸಂಪತ್ತುಗಳನ್ನು ದೇಶಕ್ಕೆ ಕೊಟ್ಟಿದೆ. ಹಿಂದೆ ಅವಿದ್ಯಾವಂತರು ಇರುವಾಗ ಅಪರಾಧಗಳು ಕಡಿಮೆಯೇ ಇತ್ತು, ಅತೀ ಹೆಚ್ಚು ಶಿಕ್ಷಣ ಪಡೆದ ಯುವ ಸಮುದಾಯವೇ ಈಗ ಅತೀ ಹೆಚ್ಚು ಅಪರಾಧ ಕೃತ್ಯಗಳಲ್ಲಿ ಭಾಗವಹಿಸುತ್ತಿರುವುದು ದುರಂತ, ಯುವ ಸಮುದಾಯದಲ್ಲಿ ಮೃಗೀಯ ಮನಸ್ಸುಗಳು ಹೆಚ್ಚಾಗುತ್ತಿದೆ, ಗೃಹ ಸಚಿವನಾಗಿ ಹೊದ ಕಡೆಗೆ ಎಲ್ಲ ನಮ್ಮೂರಿಗೆ ಪೊಲೀಸ್‌ ಠಾಣೆ, ಕೋರ್ಟ್‌ ಮಂಜೂರಿ ಮಾಡಿ ಎಂಬ ಮನವಿಗಳು ಬರುತ್ತಿರುವುದು ಬೇಸರದ ಸಂಗತಿ ಎಂದರು.

ಸಚಿವ ಸುನಿಲ್‌ ಕುಮಾರ್‌ ಅವರು ಮಾತನಾಡಿ,  ಅಂಕವೇ ಮಾತೃ ಶಿಕ್ಷಣದ ಉದ್ದೇಶ ಆಗಬಾರದು. ಮೌಲ್ಯ ಶ್ರದ್ಧೆ, ಸಂಸ್ಕೃತಿ ರಾಷ್ಟ್ರೀಯತೆ ಶಿಕ್ಷಣದಿಂದ ದೊರೆತಾಗ ಮಾತ್ರ ಸದೃಢ ಭಾರತ ನಿರ್ಮಾಣ ಸಾಧ್ಯ.  ರಾಮಾಯಣ, ಮಹಾಭಾರತ ಮತ್ತು ಭಗವದ್‌ಗೀತೆಯನ್ನು ಶಿಕ್ಷಣದಲ್ಲಿ ಅಳವಡಿಸಿಕೊಳ್ಳಲು ಮುಂದಾದಾಗ ವಿವಾದವಾಗಿರುವುದು ದುರಂತ, ಗುಣಮಟ್ಟದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿರುವ ಎಸ್ಆರ್‌ ಸಮೂಹ ಶಿಕ್ಷಣದ ಜೊತೆಗೆ ಸಮಾಜದ ಸೇವೆಯಲ್ಲೂ ಮುಂಚೂಣಿಯಲ್ಲಿದೆ ಎಂದು ಅಭಿನಂದಿಸಿದರು.

  1.  

ಹೆಬ್ರಿಯ ಎಸ್ ಆರ್.ಸಮೂಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎಚ್.ನಾಗರಾಜ ಶೆಟ್ಟಿ ಮಾತನಾಡಿ, 8 ವಿದ್ಯಾರ್ಥಿಗಳಿಂದ ಆರಂಭಗೊಂಡ ಸಂಸ್ಥೆಯಲ್ಲಿ ಈಗ 2500 ಮಂದಿ ವಿದ್ಯಾರ್ಥಿಗಳಿರುವ ಸಂಸ್ಥೆಯಾಗಿ ರಜತ ಸಂಭ್ರಮದಲ್ಲಿರುವುದು ಸಾರ್ಥಕ ಭಾವನೆ ಮೂಡಿಸಿದೆ. ನಮ್ಮನ್ನು ಕೈಹಿಡಿದು ಮುನ್ನಡೆಸಿದ ಸರ್ವರಿಗೂ ಕೃತಜ್ಞತೆ ಎಂದರು.

ಐಎಎಸ್‌ ಅಧಿಕಾರಿ ಆಗಿ ಬಡ್ತಿ ಪಡೆದಿರುವ ಎಳ್ಳಾರೆ ಸದಾಶಿವ ಪ್ರಭು ಮತ್ತು ವಿವಿಧ ಕ್ಷೇತ್ರಗಳ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.ವಿದ್ಯಾರ್ಥಿ ವೇತನ ನೀಡಲಾಯಿತು. ಆದರ್ಶ ಶಿಕ್ಷಕಿ ಪ್ರಶಸ್ತಿ ಪುರಸ್ಕೃತ ಸುಜಾತಾ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.

ಉಪನ್ಯಾಸಕ ದೀಪಕ್‌ ಎನ್‌ ದುರ್ಗಾ ಸಂಪಾದಕತ್ವದಲ್ಲಿ ಕಲ್ಪವೃಕ್ಷ ವಿಶೇಷ ಸಂಚಿಕೆ ಬಿಡುಗಡೆಗೊಳಿಸಲಾಯಿತು. ವಿವಿಧ ಮನರಂಜನೆಯ ಕಾರ್ಯಕ್ರಮಗಳು ನಡೆಯಿತು.

ಹೆಬ್ರಿಯ ಎಸ್ ಆರ್.ಸಮೂಹ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಸಪ್ನಾ ಎನ್‌. ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಸ್ಥೆಯ ಅಭಿವೃದ್ಧಿಗೆ ಸಹಕಾರ ಕೋರಿದರು.

ಹೆಬ್ರಿ ಎಸ್ ಆರ್.ಸಮೂಹ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಡಾ.ಯತಿರಾಜ್‌ ಶೆಟ್ಟಿ, ಪ್ರಾಂಶುಪಾಲ ಪ್ರಶಾಂತ್‌ ಕುಮಾರ್‌ ಎಚ್.‌ ಭಗವತಿ, ಆಡಳಿತಾಧಿಕಾರಿ ಹೆರಾಲ್ಡ್‌ ಲೂಯಿಸ್‌ ಇದ್ದರು.

ಮುಖ್ಯ ಶಿಕ್ಷಕ ಗೋಪಾಲ ಆಚಾರ್ಯ ಸ್ವಾಗತಿಸಿ ಉಪನ್ಯಾಸಕಿ ನಿಶಿತಾ ನಿರೂಪಿಸಿದರು.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com