Breaking News

ಅಬ್ಬಕ್ಕ ಉತ್ಸವಕ್ಕೆ ಅನುದಾನ ಕಡಿತ: ಖಾದರ್ ಆಕ್ರೋಶ

 

ಮಂಗಳೂರು: ಬಿಜೆಪಿ ಸರ್ಕಾರವು ಅಬ್ಬಕ್ಕ ಉತ್ಸವಕ್ಕೆ ಅನುದಾನ ಕಡಿತಗೊಳಿಸುವ ಮೂಲಕ ವೀರರಾಣಿ ಅಬ್ಬಕ್ಕಳಿಗೆ ಅವಮಾನ ಮಾಡುತ್ತಿರುವುದು ಖಂಡನೀಯ ಎಂದು ವಿಧಾನಸಭೆ ವಿರೋಧ ಪಕ್ಷದ ಉಪ ನಾಯಕ ಯು.ಟಿ.ಖಾದರ್ ಬುಧವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದ ವೇಳೆ ಅಬ್ಬಕ್ಕ ಉತ್ಸವಕ್ಕೆ 50 ಲಕ್ಷ ರೂಪಾಯಿ  ಬಿಡುಗಡೆ ಮಾಡಲಾಗಿತ್ತು. ಆದರೆ ಈಗಿನ ಸರಕಾರ ಈ ಮೊತ್ತವನ್ನು ಕಡಿತಗೊಳಿಸಿ ಕೇವಲ 10 ಲಕ್ಷ ರೂಪಾಯಿಗೆ ಕಡಿತ ಮಾಡಿದೆ ಎಂದು ಆರೋಪಿಸಿದರು.

ರಾಜ್ಯದಲ್ಲಿ ಹಾಲು ಉತ್ಪಾದನೆಯ ಪ್ರಮಾಣದಲ್ಲಿ ಇಳಿಮುಖ ಕಂಡಿದೆ. ಗೋ ಸಂತತಿಯನ್ನು ಹೆಚ್ಚಿಸಲು ಸರಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಗೋವಿನ ಹೆಸರಿನಲ್ಲಿ ರಾಜಕೀಯ ಮಾತ್ರ ಮಾಡುತ್ತಿದ್ದಾರೆ ಎಂದು ಆಕ್ರೋಶ ಹೊರ ಹಾಕಿದರು.

  1.  

ರಾಜ್ಯದಲ್ಲಿ ಪಶುವೈದ್ಯರ ನೇಮಕ ಮಾಡಿಲ್ಲ. ಪಶು ವೈದ್ಯಕೀಯ ಚಿಕಿತ್ಸೆಗಾಗಿ ಆರಂಭಿಸಲಾದ ಅಂಬುಲೆನ್ಸ್ ಕಾರ್ಯ ನಿರ್ವಹಿಸುತ್ತಿಲ್ಲ. ಸಿಬ್ಬಂದಿ ನೇಮಕವನ್ನೇ ಮಾಡಿಲ್ಲ. 21 ಸಾವಿರ ಹಸುಗಳು ಸಾವಿಗೀಡಾಗಿದ್ದು, ಸರಕಾರದಿಂದ ಸೂಕ್ತ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿದರು.

ರಾಜ್ಯದ ಜನತೆಗೆ ಯಾವುದೇ ಸ್ಥಳದಲ್ಲಿ ಜೀವರಕ್ಷಣೆಗೆ ಸಹಕಾರಿದಿಂದ ನೀಡಲಾಗಿದ್ದ 108 ಅಂಬುಲೆನ್ಸ್ ಸೇವೆ ಬಗ್ಗೆ ಸರಕಾರ ನಿರ್ಲಕ್ಷ್ಯ ವಹಿಸಿದೆ. ಇದರಿಂದಾಗಿ ಈ ಸೇವೆ ಜನರಿಗೆ ಸಕಾಲದಲ್ಲಿ ದೊರೆಯುತ್ತಿಲ್ಲ. ಕೋವಿಡ್ 3ನೇ ಅಲೇ ಪ್ರವೇಶವಾಗಿದ್ದರೂ ಸರಕಾರ ಇನ್ನೂ ನಿದ್ರೆಯಿಂದ ಎದ್ದಿಲ್ಲ. ಆಮ್ಲಜನಕ ಘಟಕಗಳನ್ನು ಸುಸ್ಥಿತಿಯಲ್ಲಿ ಇಟ್ಟಿಲ್ಲ. ಡಬ್ಬಲ್ ಎಂಜಿನ್ ಸರಕಾರಕ್ಕೆ ಕೋಮುವಾದ ಇಂಧನ. ಅದರ ವಿಷ ಗಾಳಿಯನ್ನು ಜನರ ಮೇಲೆ ಬಿಡುತ್ತಿದೆ. ಜನರಿಗೆ ಕಣ್ಣಲ್ಲಿ ನೀರು ತರಿಸಿದ ಡಬ್ಬಲ್ ಎಂಜಿನ್ ಸರಕಾರವನ್ನು ಜನರೇ ಗುಜರಿಗೆ ಸಾಗಿಸುವ ಕಾಲ ದೂರ ಇಲ್ಲ ಎಂದರು.

ರಸ್ತೆ ಗುಂಡಿ ಸಮಸ್ಯೆ ಬಗ್ಗೆ ಮಾತನಾಡಬೇಡಿ, ಲವ್ ಜಿಹಾದ್ ಬಗ್ಗೆ ಗಮನಹರಿಸಿ ಎನ್ನುವ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಹೇಳಿಕೆ ಅವರು ಅಭಿವೃದ್ಧಿ ಕೆಲಸ ಮಾಡುವ ನೈತಿಕತೆಯನ್ನು ಕಳೆದುಕೊಂಡಿರುವುದಕ್ಕೆ ಸಾಕ್ಷಿ ಎಂದರು.

ತಂದೆ-ತಾಯಿ-ಮಕ್ಕಳ ನಡುವೆ ಬಿರುಕು ಮೂಡಿಸುವ ಕೆಲಸದಲ್ಲಿ ತೊಡಗಿರುವವರು ಪಕ್ಷದ ನಾಯಕರ ನಡುವೆ ಬಿರುಕು ಮೂಡಿಸಲು ನನ್ನ ಮತ್ತು ರಮಾನಾಥ ರೈಅವರ ಹೆಸರನ್ನು ಪ್ರಸ್ತಾಪಿಸಿ ಸುಳ್ಳು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈ ರೀತಿ ಹೇಳಿಕೆ ನೀಡಿರುವ ಸಂಸದರ ಬಳಿ ‘ಮುಂದಿನ ಚುನಾವಣೆಯಲ್ಲಿ ರಮಾನಾಥ ರೈ ಜಯ ಗಳಿಸಿ ಸಚಿವರಾಗುತ್ತಾರೆ’ ಎಂದು ಹೇಳಿದ್ದೇನೆ. ಅದನ್ನು ಅವರು ಎಲ್ಲೂ ಹೇಳುತ್ತಿಲ್ಲ ಎಂದು ಖಾದರ್ ತಿಳಿಸಿದ್ದಾರೆ.

ಕಾಂಗ್ರೆಸ್ ಮುಖಂಡರಾದ ಮಮತಾ ಗಟ್ಟಿ, ಉದಯ ಕುಮಾರ್, ಕೃಷ್ಣ ಮೂರ್ತಿ ಇದ್ದರು.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com