Breaking News

ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಸಹಿ ಅಭಿಯಾನ…

 

ಕರಾವಳಿ ಡೈಲಿನ್ಯೂಸ್

ಪುತ್ತೂರು: ಜಿಲ್ಲಾ ಕೇಂದ್ರ ಆಗುವತ್ತ ದಾಪುಗಾಲು ಹಾಕುತ್ತಿರುವ ಪುತ್ತೂರಿಗೆ ಸರ್ಕಾರಿ ವೈದ್ಯಕೀಯ ಕಾಲೇಜು ಬೇಕು ಎಂಬುದು ಈ ಭಾಗದ ಜನರ ಬೇಡಿಕೆಯಾಗಿದೆ. ಇದೊಂದು ಪಕ್ಷಾತೀತ ಹೋರಾಟ. ನಮ್ಮದು ಸರ್ಕಾರದ ವಿರುದ್ದ ಸಂಘರ್ಷವಲ್ಲ. ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಸಹಿ ಅಭಿಯಾನ ಆರಂಭಿಸಲಾಗುತ್ತದೆ ಎಂದು ಮೆಡಿಕಲ್ ಕಾಲೇಜು ಹೋರಾಟ ಸಮಿತಿ ಸಂಚಾಲಕ ಲಕ್ಷ್ಮೀಶ ಗಬ್ಲಡ್ಕ ಹಾಗೂ ಅಧ್ಯಕ್ಷ ಎಂ.ಬಿ. ವಿಶ್ವನಾಥ ರೈ ಅವರು ಜಂಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಸರ್ಕಾರಿ ವೈದ್ಯಕೀಯ ಕಾಲೇಜು ನಿರ್ಮಾಣಕ್ಕಾಗಿ ಸರ್ಕಾರ ಈಗಾಗಲೇ ಪುತ್ತೂರಿನ ಬನ್ನೂರಿನಲ್ಲಿ 40 ಎಕರೆ ಜಾಗ ಮೀಸಲಿಟ್ಟಿದೆ. ವೈದ್ಯಕೀಯ ಕಾಲೇಜಿಗೆ ಮೀಸಲಿಟ್ಟಿದ್ದ ಜಾಗಕ್ಕೆ ಬೇಲಿ ನಿರ್ಮಾಣ ಮಾಡಿ ನಾಮಫಲಕ ಅಳವಡಿಸಬೇಕು. ಬೇರೆ ಕಾರ್ಯಕ್ಕೆ ಈ ಜಾಗ ಬಳಕೆ ಮಾಡಬಾರದು ಎಂದು ಒತ್ತಾಯಿಸಿದರು.

  1.  

ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ಪೂರಕವಾಗಿ ಪುತ್ತೂರಿನ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯನ್ನು 300 ಹಾಸಿಗೆ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಬೇಕು. ವೈದ್ಯರ ನೇಮಕಾತಿ ಸೇರಿದಂತೆ ಪೂರ್ಣ ಪ್ರಮಾಣದಲ್ಲಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕು. ಈ ಬಗ್ಗೆ ಅಧಿವೇಶನದಲ್ಲಿ ಶಾಸಕರು ಪ್ರಸ್ತಾಪಿಸುವಂತೆ ನಿಯೋಗವು ಬೆಳಗಾವಿಗೆ ಹೋಗಿ ಶಾಸಕರ ಜತೆಗೆ ಮಾತುಕತೆ ನಡೆಸಲಿದೆ ಎಂದು ತಿಳಿಸಿದರು.

ಈಗಾಗಲೇ ರಾಜ್ಯ ಸರ್ಕಾರವು ಜಿಲ್ಲೆಯ ಕೆಲವು ಕಡೆಗಳಲ್ಲಿ ಪಿಪಿಪಿ ಮಾದರಿಯಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ಮುಂದಾಗಿದೆ. ಇದು ಸಂವಿಧಾನ ವಿರೋಧಿ ನಡೆ. ಪಿಪಿಪಿ ಮಾದರಿಯ ವ್ಯವಸ್ಥೆ ಜಾರಿಯಾದಲ್ಲಿ ಸರ್ಕಾರಿ ಕಾಲೇಜಿನ ಹಿಡಿತವನ್ನು ಖಾಸಗಿ ಸಂಸ್ಥೆಗಳಿಗೆ ನೀಡಿದಂತಾಗುತ್ತದೆ. ಅಲ್ಲದೆ ಬಡವರಿಗೆ ಇನ್ನಷ್ಟು ಅನಾನುಕೂಲವಾಗಲಿದೆ ಎಂದು ತಿಳಿಸಿದರು.

ಕರಾವಳಿ ಪ್ರದೇಶವು ಕೋಮು ಸಂಘರ್ಷಕ್ಕೆ ಒಳಗಾಗುತ್ತಿದ್ದು,ಕೋಮು ಸೂಕ್ಷ್ಮ ಪ್ರದೇಶವಾಗಿರುವ ಇಲ್ಲಿ ಸಣ್ಣ ವಸ್ತ್ರದ ಬಣ್ಣವೂ ಕೋಮು ಭಾವನೆ ಕೆರಳಿಸುವ ಕೆಲಸ ಮಾಡುತ್ತಿದೆ. ನಮ್ಮ ಹೋರಾಟ ಸಮಿತಿಯು ಎಲ್ಲಾ ಜಾತಿ, ಧರ್ಮ ಮತ್ತು ರಾಜಕೀಯ ಪಕ್ಷಗಳನ್ನು ಒಳಗೊಂಡಿದ್ದು, ಕರಾವಳಿಯಲ್ಲಿ ಸೌಹಾರ್ದತೆ ಬೆಳೆಸಲು ಕಾರಣವಾಗಲಿದೆ ಎಂದು ಅವರು ತಿಳಿಸಿದರು.

ಸರ್ಕಾರಿ ಮೆಡಿಕಲ್ ಕಾಲೇಜು ಹೋರಾಟ ಸಮಿತಿ ಉಪಾಧ್ಯಕ್ಷ ಝೇವಿಯರ್ ಡಿಸೋಜ, ರೂಪೇಶ್ ರೈ ಅಲಿಮಾರ್ ಮತ್ತು ಡಾ.ವಿಶುಕುಮಾರ್ ಇದ್ದರು.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com